ಒಂದನೇ ತರಗತಿ ಪ್ರವೇಶಕ್ಕೆ ಮಗುವಿಗೆ ಆರು ವರ್ಷ ಕಡ್ಡಾಯ !!!

ಒಂದನೇ ತರಗತಿ ಪ್ರವೇಶಕ್ಕೆ ಮಗುವಿಗೆ ಆರು ವರ್ಷ ಕಡ್ಡಾಯ !!!

ರಾಜ್ಯ ಸರ್ಕಾರದ ಅಧಿಸೂಚನೆ ಎತ್ತಿ ಹಿಡಿದ ಹೈಕೋರ್ಟ್ । ಎಲ್ ಕೆ ಜಿ ಮಗುವಿನ ಪಾಲಕರು ಸಲ್ಲಿಸಿದ್ದ ಅರ್ಜಿ ವಜಾ ..........



                    ಸರ್ಕಾರೀ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 2025-26ನೇ ಸಾಲಿನಿಂದ ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಆರು ವರ್ಷ ತುಂಬಿರಬೇಕು ಎಂಬ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
2022ರ ಜುಲೈ 26ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಬೇಕು. ನಾಲ್ಕು ವರ್ಷದ ತಮ್ಮ ಪುತ್ರಿಗೆ ಪ್ರಸಕ್ತ ವರ್ಷದಲ್ಲಿ ಎಲ್ ಕೆ ಜಿ ಕಲಿಯಲು ಅನುಮತಿ ನೀಡಬೇಕು ಎಂದು ಕೋರಿ ನಗರದ ಅನಿಕೇತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

      ಮಾರ್ಗಸೂಚಿಯ ಹಿಂದೆ ಮೇಲ್ನೋಟಕ್ಕೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಕೇಂದ್ರಿತ ಉದ್ದೇಶವಿದೆ ಎಂದು ನ್ಯಾಯಾಲಯಕ್ಕೆ ಅರ್ಥವಾಗಿದೆ. ಹೀಗಾಗಿ ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿ ಅದೇ ತರಗತಿಯಲ್ಲಿ ಉಳಿಯಬೇಕಾಗುತ್ತದೆ ಎಂಬ ಕಾರಣಕ್ಕೆ ಮಾರ್ಗಸೂಚಿಯಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ರಾಷ್ಟೀಯ ಶಿಕ್ಷಣ ನೀತಿ-(ಎನ್ ಈ ಪಿ) 2020 ಅಳವಡಿಸಿಕೊಂಡಿದ್ದು, ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ಮತ್ತು ಗರಿಷ್ಠ ಅರ್ಹತಾ ಮಾನದಂಡವನ್ನು ಸರಿಯಾಗಿ ಮಾರ್ಪಾಡು ಮಾಡಿದೆ. ವಿದ್ಯಾಕೇಂದ್ರ ಮತ್ತು ರಾಜ್ಯ ಸರ್ಕಾರವು ಹೊರಡಿಸಿರುವ ಪ್ರವೇಶಾತಿ ಮಾರ್ಗಸೂಚಿಗಳು ಸಿಂಧುವಾಗಿದ್ದು, ಎನ್ ಈ ಪಿ ಗೆ ಅನುಗುಣವಾಗಿವೇ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

whatss


ಏನಿದು ಪ್ರಕರಣ ?

          ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ತಿಶಿಕಾಳನ್ನು ಪ್ರಸಕ್ತ ವರ್ಷ ಎಲ್ ಕೆ ಜಿ ಗೆ ಸೇರ್ಪಡೆ ಮಾಡಿಕೊಳ್ಳುವಂತೆ ಆಕೆಯ ಪಾಲಕರು ಕೋರಿದ್ದರು. ಇದನ್ನು ಮನ್ನಿಸಿ ಈ ಸಂಬಂಧ ಶಾಲೆಯು ಶುಲ್ಕವನ್ನು ವಸೂಲಿ ಮಾಡಿತ್ತು. 2023ರ ಜೂನ್ 1ಕ್ಕೆ ಸರಿಯಾಗಿ ತಿಶಿಕಾ ನಾಲ್ಕು ವರ್ಷ ಪೂರ್ಣಗೊಳಿಸದಿರುವುದರಿಂದ ಆಕೆ ಎಲ್ ಕೆ ಜಿ ಗೆ ಪ್ರವೇಶ ಪಡೆಯಲು ಅರ್ಹಳಲ್ಲ ಎಂದು ಶಾಲೆಯು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ನಿರ್ದೇಶಕರ 2018ರ ಮೇ 23 ರ ಆದೇಶ ಉಲ್ಲೇಖಿಸಿ (1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ನಿಗದಿ ಮಾಡಿರುವ ಆದೇಶ) 2023 ರ ಮೇ 27ರಂದು ಪಾಲಕರಿಗೆ ಈ ಮೇಲ್ ಕಳುಹಿಸಿತ್ತು. ತಿಷಿಕಾಳನ್ನು ನರ್ಸರಿಯಲೇ ಉಳಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿತ್ತು. 2018ರ ಮೇ 23ರ ಆದೇಶದಲ್ಲಿ ರಾಜ್ಯ ಸರ್ಕಾರವು ಒಂದನೇ ತರಗತಿ ಪ್ರವೇಶಕ್ಕೆ 2025-26 ನೇ ಸಾಲಿನಲ್ಲಿ 6 ವರ್ಷ ತುಂಬಿರಬೇಕು ಎಂದು ಹೇಳಿದೆ. ಇದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ಅದನ್ನು ಎತ್ತಿ ಹಿಡಿದಿದೆ.

ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗದು :

     ರಾಷ್ಟ್ರೋತ್ಥಾನ ವಿದ್ಯಾಕೇಂದ್ರವನ್ನು ಶಿಕ್ಷಣ ಇಲಾಖೆಯ ಮೂಲಕ ಕೇಂದ್ರ ಸರ್ಕಾರ ನಡೆಸುತ್ತಿದೆ. ಹೀಗಾಗಿ ವಿದ್ಯಾಕೇಂದ್ರವು ಎನ್ ಈ ಪಿ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಜಾಗತಿಕ ಶೈಕ್ಷಣಿಕ ಮಾರ್ಗಸೂಚಿಗಳನ್ನು ಆಧರಿಸಿ ಪ್ರವೇಶಾತಿ ವಯಸ್ಸನ್ನು ಎನ್ ಈ ಪಿ ಮಾನದಂಡಗಳಲ್ಲಿ ಸೇರಿಸಲಾಗಿದೆ. ಮಕ್ಕಳಿಗೆ ಸರಿಯಾದ ಆರೈಕೆ ಮತ್ತು ಶಿಕ್ಷಣ ನೀಡಬೇಕು. ಆಟ ಕೇಂದ್ರಿತ, ಚಟುವಟಿಕೆ ಕೇಂದ್ರಿತ, ಹೊಂದಿಕೊಳ್ಳುವ ಕಲಿಕೆಯ ಭರವಸೆಯ ಹಿನ್ನಲೆಯಲ್ಲಿ ತಜ್ಞರು ಹೊಸ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆ. ಮಕ್ಕಳು ಪ್ರೌಢಶಿಕ್ಷಣ ಪಡೆಯುವಾಗ ಅವರಲ್ಲಿ ಪರೀಕ್ಷಾ ಸಂಬಂಧಿ ಒತ್ತಡ ಮತ್ತು ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಸಮಗ್ರ ನೀತಿ ರೂಪಿಸಲಾಗಿದೆ ಎಂದು ತಜ್ಞರು ಹೇಳಿರುವಾಗ ಸಕ್ಷಮ ಪ್ರಾಧಿಕಾರ ರೂಪಿಸಿರುವ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗದು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. 2020 ರ ಮೇ 11ರ ಅಧಿಸೂಚನೆಯ ಪ್ರಕಾರ 1ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ 5.5 ವರ್ಷ ಆಗಿರಬೇಕು. ಎಲ್ ಕೆ ಜಿ ಮಗುವಿಗೆ ಸೇರಿಸಲು 3.5 ವರ್ಷ ಆಗಿರಬೇಕು ಎಂದು ಹೇಳಲಾಗಿದೆ. ಈ ಅಧಿಸೂಚನೆಯು ತಮಗೆ ಅನ್ವಯವಾಗುತ್ತದೆಯೇ ವಿನಾ ಆಕ್ಷೇಪಾರ್ಹವಾದ ಅಧಿಸೂಚನೆ ಅನ್ವಯಿಸುವುದಿಲ್ಲ ಎಂದು ಅರ್ಜಿದಾರರ ಪರ ವಕೀಲ ಕೆ ಎನ್ ಶ್ರೀನಿವಾಸ ವಾದಿಸಿದ್ದರು. 




whatss



       
                ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ 2019 ರ ನಿಬಂಧನೆಗಳು ಮತ್ತು ಎನ್ ಈ ಪಿ ಯನ್ನು ಗಮನದಲ್ಲಿಟ್ಟುಕೊಂಡು ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯಸ್ಸು ಮಿತಿ ನಿಗದಿಪಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಂ ಹುಯಿಲಗೋಳ ಸಮರ್ಥಿಸಿದ್ದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು