ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ
ರೈತರು ಬಳಸುವ ಕೃಷಿ ಯಂತ್ರೋಪಕರಣಗಳಿಗೆ ಇಂಧನ ವೆಚ್ಚದ ನೆರವು ನೀಡುವ ರೈತಶಕ್ತಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಗಳವಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಸಾಂಕೇತಿಕಾಗಿ ಚಾಲನೆ ನೀಡಿದರು.
ಅದರಂತೆ ಸದ್ಯ ರಾಜ್ಯದ 51.80 ಲಕ್ಷ ರೈತರ ಖಾತೆಗೆ 383.15 ಕೋಟಿ ನೇರವಾಗಿ ಜಮೆಯಾಗಿದೆ ಎಂದು ಇದೆ ವೇಳೆ ಮಾಹಿತಿ ನೀಡಿದರು. ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ನೂತನ ಯೋಜನೆಗಳಿಗೆ ಚಾಲನೆ ಹಾಗು ಕೃಷಿ ಪಂಡಿತ್, ಕೃಷಿ ಪ್ರಶಸ್ತಿ ಪ್ರಧಾನ ಮತ್ತು ರೈತ ಶಕ್ತಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯ ನಂತರ ಕೃಷಿ ಬೆಳೆದಿದೆ. ಹಸಿರು ಕ್ರಾಂತಿಯಾಗಿದೆ. ಇಷ್ಟಾಗಿಯೂ ರೈತರು ಮಾತ್ರ ಆರ್ಥಿಕವಾಗಿ ಸದೃಢರಾಗುತ್ತಿಲ್ಲ. ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡಲು ರಾಜ್ಯ ಸರ್ಕಾರ ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರಾಜ್ಯದ ಎಲ್ಲಾ ವರ್ಗದ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯ ಪ್ರೋತ್ಸಾಹದ ದೃಷ್ಟಿಯಿಂದ ಇಂಧನ ವೆಚ್ಚ (ಡೀಸೆಲ್ ವೆಚ್ಚದ) ಭಾರವನ್ನೂ ರಾಜ್ಯ ಸರ್ಕಾರ ಕಡಿತಗೊಳಿಸಲು ರೈತ ಶಕ್ತಿ ಯೋಜನೆ ಜಾರಿಗೆ ತಂದಿದ್ದು, ಪ್ರತಿ ಎಕರೆಗೆ 250ರಂತೆ ಗರಿಷ್ಟ 5 ಎಕರೆಗೆ 1250 ನೀಡುತ್ತಿದೆ. ಇದಕ್ಕಾಗಿ 500 ಕೋಟಿ ಅನುದಾನ ತೆಗೆದಿರಿಸಿದೆ. ಅಲ್ಲದೆ ಭೂರಹಿತ ಕೃಷಿ ಕಾರ್ಮಿಕ ಹಾಗೂ ರೈತರ ಮಕ್ಕಳಿಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದು, 11 ಲಕ್ಷ ಮಕ್ಕಳಿಗೆ 488 ಕೋಟಿ ಅನುದಾನ ಒದಗಿಸಿದೆ ಎಂದು ಅಂಕಿ ಸಮೇತ ಬಿಜೆಪಿ ಸರ್ಕಾರದ ಸಾಧನೆ ಹೇಳಿಕೊಂಡರು. ಪ್ರತಿ ಗ್ರಾಮದಲ್ಲಿ ಎರಡು ಯುವಕ ಸಂಘಗಳಿದ್ದು ಅವುಗಳಿಗೆ 1 ಲಕ್ಷ ಸರ್ಕಾರದ ಅನುದಾನ, 4 ಲಕ್ಷ ಬ್ಯಾಂಕ್ ಸಾಲ ನೀಡುವ ಮೂಲಕ ಗ್ರಾಮದಲ್ಲೇ ಮಾರುಕಟ್ಟೆ ಸೇರಿದಂತೆ ಆರ್ಥಿಕ ಪುನಶ್ಚೇತನ ಮಾಡಲಾಗುವುದು. ಇದರೊಂದಿಗೆ ಪ್ರತಿ ಗ್ರಾಮದಲ್ಲಿ ಮಹಿಳಾ ಮಂಡಳಿಗಳಿಗೂ ಆರ್ಥಿಕ ಬಲ ನೀಡುತ್ತಿದೆ.
ರೈತ ಸಂಜಿವೀನಿಗೆ ಚಾಲನೆ : ಇದೆ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಪ್ರಮುಖ ಎನಿಸಿರುವ ಮಣ್ಣು ಮತ್ತು ನೀರಿನ ಪರೀಕ್ಷೆ, ಕೀಟ ಮತ್ತು ರೋಗಗಳನ್ನು ಪತ್ತೆ ಹಚ್ಚುವಿಕೆ ಹಾಗೂ ನಿಯಂತ್ರಣ ಕ್ರಮಗಳ ಕುರಿತು ಮಾಹಿತಿಯನ್ನು ರೈತರ ಕ್ಷೇತ್ರ ಭೇಟಿ ಮೂಲಕ ನೀಡಲು, 11.52 ಕೋಟಿ ಅನುದಾನದಲ್ಲಿ 64 ಸಂಚಾರಿ ಸಸ್ಯ ಆರೋಗ್ಯದ ಕೃಷಿ ಸಂಜೀವಿನಿ ವಾಹನಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್, ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ ಮತ್ತಿತರು ಇದ್ದರು.
ಈ ಬರಿ ರೈತಪರ ಬಜೆಟ್ ಮಂಡನೆ : ಫೆ 17ರಂದು ಮಂಡಿಸಲಿರುವ ರಾಜ್ಯ ಬಜೆಟ್ ವಿಶೇಷವಾಗಿ ರೈತಪರವಾಗಿರಲಿದೆ. ಕೃಷಿ ಸಾಲದ ನೀತಿ ಬದಲಾವಣೆ ಸೇರಿ ಹತ್ತು ಹಲವು ಯೋಜನೆಗಳನ್ನು ರೈತರಿಗೆ ನೀಡುವ ಚಿಂತನೆ ನಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರಿಗೆ ಶುಭ ನೀಡಿದ್ದಾರೆ. ರೈತರು ಬೆಳೆದ ಬೆಳೆಗೆ ಬೆಳೆಯ ಅನಿಶ್ಚಿತತೆ ಹೋಗಲಾಡಿಸಿ ನಿಶ್ಚಿತತೆ ತರುವುದು ತಮ್ಮ ಗುರಿ. ಯಾವುದೇ ಒಂದು ಬೆಳೆಯ ಆದಾಯದ ನಿರೀಕ್ಷೆ ಹಾಗೂ ಲೆಕ್ಕಾಚಾರ ಹಾಕದೆ ರೈತರು ಬೆಲೆ ಬಿತ್ತಿ ಬೀಜ, ಗೊಬ್ಬರ, ಯಂತ್ರೋಪಕರಣ ಹಾಗೂ ಔಷಧ ಅಂಥವುಗಳಿಗೆ ಅತ್ಯಧಿಕ ವೆಚ್ಚ ಮಾಡುತ್ತಿದ್ದಾರೆ. ಬೆಳೆಯ ಖರ್ಚು-ವೆಚ್ಚ ತೆಗೆದು ಉಳಿತಾಯ ಆಗುವ ರೀತಿಯಲ್ಲಿ ನಿಶ್ಚಿತ ಬೆಲೆ ಬರುವಂತೆ ಯೋಜನೆ ರೂಪಿಸಲಾಗುತ್ತಿದೆ. ಇದರೊಂದಿಗೆ ಪ್ರಸಕ್ತ ವರ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 33 ಲಕ್ಷ ಕೋಟಿ ನೀಡಲಾಗಿದ್ದು, ರೈತರಿಗೆ ನೀಡುತ್ತಿರುವ ಈ ಸಾಲದ ನಿತಿಯಲ್ಲು ಬದಲಾವಣೆ ಮಾಡುವ ನಿಟ್ಟಿನಲ್ಲಿ ತಾವು ಚಿಂತನೆ ನಡೆಸಿದ್ದಾಗಿ ತಿಳಿಸಿದರು.