ಸಿನಿಮಾ ಹೆಸರಿನಿಂದ ಉತ್ತಮ ಸ್ಥಾನ ತಲುಪಿದ ಅನೇಕರು । ಅಂಬರೀಷ್, ಉಮಾಶ್ರೀ, ಅನಂತನಾಗ್, ಹೀಗೆ ಸಾಲು ಸಾಲು ಮದ್ನಿ ಈ ಬಾರಿ ಇನ್ನಷ್ಟು ಸಿನಿ ತಾರೆಯರು ರಾಜಕೀಯಕ್ಕೆ ಧುಮುಕುವ ಸಾಧ್ಯತೆ
ನಾಯಕ ನಟ ಅಂಬರೀಶ್ ಅವರು ಕೇಂದ್ರ ಸಚಿವರಾಗಿ ;
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ನಟ ಕಿಚ್ಚ ಸುದೀಪ್ ಬಿಜೆಪಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ, ಭಾರಿ ಚರ್ಚೆ ಆರಂಭವಾಗಿದೆ. ಆದರೆ ರಾಜಕೀಯದೊಂದಿಗೆ ಸಿನಿಮಾ ಮಂದಿಯ ನಂಟು ಹೊಸದೇನಲ್ಲ. ಈ ಹಿಂದೆ ಅನೇಕ ಸಿನಿ ತಾರೆಯರು ಪಕ್ಷಗಳೊಂದಿಗೆ ಗುರುತಿಸೊಕೊಂಡಿದ್ದಾರೆ,ಕೆಲವರು ಯಶಸ್ವಿ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಸಿನಿಮಾ ರಂಗದಲ್ಲಿ ಬ್ರಾಂಡ್ ಕ್ರಿಯೇಟ್ ಆಗುತ್ತಿದ್ದಂತೆ, ಆ ಬ್ರಾಂಡ್ ಬಳಸಿಕೊಂಡು ಸಾರ್ವಜನಿಕ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಬೇಕು ಎನ್ನುವ ಅನೇಕರಿದ್ದು, ಅವರಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ. ಅನೇಕರು ಅತ್ತ ಸಿನಿಮಾಗಳಲ್ಲಿಯೂ ಇಲ್ಲವೇ ಇತ್ತ ರಾಜಕೀಯವಾಗಿಯೂ ದೊಡ್ಡ ಪ್ರಮಾಣದಲ್ಲಿ ಬೆಳೆಯದೆ ಇರುವ ಉದಾಹರಣೆಗಳಿವೆ.
ಸಿನಿಮಾ ಹಾಗೂ ರಾಜಕೀಯ ಎರದೂ ರಂಗದಲ್ಲಿ ಯಶಸ್ವಿಯಾಗಿ ಜನಮಾನಸದಲ್ಲಿ ಉಳಿಸುಕೊಂಡಿರುವವರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಅಂಬರೀಷ್, 1998ರಲ್ಲಿ ಕಾಂಗ್ರೆಸ್ ಸೇರುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರಾದರೂ ಟಿಕೆಟ್ ಸಿಗದ ಹಿನ್ನಲೆ ಸೇರಿದ ಎರಡೇ ವರ್ಷಕ್ಕೆ ಕಾಂಗ್ರೆಸ್ ತೊರೆದು ಜೆಡಿಎಸ್ ನತ್ತ ವಾಲಿದರು. 1998 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದರು. ಆ ಬಳಿಕ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ವಾಪಸಾಗಿ ಕೇಂದ್ರ ವಾರ್ತಾ ಮತ್ತು ಸಂಪರ್ಕ ಇಲಾಖೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. ಇದಾದ ಬಳಿಕ ವಿಧಾನಸಭೆಯಿಂದ ಸ್ಪರ್ಧಿಸಿ ಗೆಲವು ಕಂಡು, ಸಿದ್ಧರಾಮಯ್ಯ ಅವರ ಸರಕಾರದಲ್ಲಿ ವಸತಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ದೆಹಲಿ ಮಟ್ಟದಲ್ಲಿ ರಮ್ಯಾ ಕಮಾಲ್ :
ಅಂಬರೀಶ್ ಅವರ ನಂತರ ದೆಹಲಿಯಲ್ಲಿ ಭಾರಿ ಹೆಸರು ಮಾಡಿದ ಸ್ಯಾಂಡಲ್ ವುಡ್ ತಾರೆ, ಎಂದರೆ ಅದು ರಮ್ಯಾ ಅವರು. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ, ಮಂಡ್ಯ ಸಂಸದೆಯಾದ ಬಳಿಕ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡರು. 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಎಐಸಿಸಿಯ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿಯೂ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.
ಇನ್ನುಳಿದಂತೆ ಅನಂತ್ ನಾಗ, ಉಮಾಶ್ರೀ, ಜಯಮಾಲಾ, ಬಿ.ಸಿ ಪಾಟೀಲ್, ಸಿ.ಪಿ ಯೋಗೇಶ್ವರ್ ಸೇರಿದಂತೆ ಹಲವು ನಾಯಕರು ಸಿನಿಮಾದೊಂದಿಗೆ ರಾಜಕೀಯದಲ್ಲಿ ಉತ್ತಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಶಾಸಕ, ಸಂಸದರಾಗಿ ಕೇಂದ್ರ ಅಥವಾ ರಾಜ್ಯ ಸಚಿವರಾಗಿರುವವರ ಪಟ್ಟಿಯನ್ನು ಹೊರತುಪಡಿಸಿ, ಸಕ್ರಿಯ ರಾಜಕೀಯದಲ್ಲಿ ಅನೇಕರಿದ್ದಾರೆ. ಪ್ರಕಾಶ್ ರಾಜ್, ಉಪೇಂದ್ರ, ಮಾಳವಿಕಾ ಅವಿನಾಶ್, ಉಪೇಂದ್ರ, ಸಾಧು ಕೋಕಿಲ, ಪೂಜಾ ಗಾಂಧಿ, ಶ್ರುತಿ, ತಾರಾ, ಅನುರಾಧ, ಸಾಯಿ ಕುಮಾರ್ ಸೇರಿದಂತೆ ಹತ್ತು ಹಲವಾರು ವಿವಿಧ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದಾರೆ.
ಇದೆ ರೀತಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಅವರು ಸುಮಲತಾ ಅವರ ವಿರುದ್ಧ ಸೋತಿದ್ದರೂ ಜೆಡಿಎಸ್ ಯುವಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಈ ಬಾರಿ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುತ್ತಿದ್ದಾರೆ. ನಾಯಕ ನಟ-ನಟಿಯನ್ನು ಹೊರತುಪಡಿಸಿ, ನಿರ್ಮಾಪಕ, ನಿರ್ದೇಶಕರು ಅನೇಕರು ರಾಜಕೀಯದಲ್ಲಿದ್ದಾರೆ. ಪ್ರಮುಖವಾಗಿ ಮುನಿರತ್ನ, ಕೆ.ಮಂಜು, ರಾಕ್ಲೈನ್ ವೆಂಕಟೇಶ್, ಎಸ್.ನಾರಾಯಣ್ ಸೇರಿದಂತೆ ಅನೇಕರು ತಮ್ಮನ್ನು ತಾವು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಸುದೀಪ್ ಎಚ್ಚರಿಕೆಯ ಹೆಜ್ಜೆ:
ಈ ನಡುವೆ ಇದೀಗ ನಟ ಕಿಚ್ಚ ಸುದೀಪ್ ಅವರು ಒಂದು ಹೆಜ್ಜೆಯನ್ನು ಬಿಜೆಪಿಗೆ ಇರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾಗಿ ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿದ್ದರೂ, ಮುಂದಿನ ದಿನದಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಇದೆ ರೀತಿ ಗೋಲ್ಡನ್ ಸ್ಟಾರ್ ಗಣೇಶ್, ನಟಿ ಅಮೂಲ್ಯ, ಯಶ್ ಸೇರಿದಂತೆ ಅನೇಕರು ಪಾರ್ಟ್ ಟೈಮ್ ಆಗಿ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿನಿಮಾ ಮಂದಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರೂ, ರಾಜ್ ಕುಮಾರ್, ವಿಷ್ಣು ವರ್ಧನ್, ರವಿಚಂದ್ರನ್ ನಂತಹ ಸ್ಟಾರ್ ನಟರು ಇಂದಿಗೂ ರಾಜಕೀಯದ ಸಹವಾಸಕ್ಕೆ ಬರಲಿಲ್ಲ. ರಾಜ್ ಕುಮಾರ್ ಕುಟುಂಬದ ಎಲ್ಲರು ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿಂದೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರೂ, ಶಿವರಾಜ್ ಕುಮಾರ್ ಹೊರತುಪಡಿಸಿ ಯಾರೂ ಸಹ ಪ್ರಚಾರಕ್ಕೆ ತೆರಳಲಿಲ್ಲ.
ಅನೇಕ ಸಿನಿಮಾ ಮಂದಿ ಒಂದೊಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ, ರಿಯಲ್ ಸ್ಟಾರ್ ಉಪೇಂದ್ರ ಅವರು ಮಾತ್ರ ಪ್ರಜಾಕಿಯ ಎನ್ನುವ ಪಕ್ಷವನ್ನೇ ಸ್ಥಾಪಿಸಿದರು. ಈ ಹಂತದವರೆಗೆ ಎಲ್ಲಿಯೂ ರಾಜಕೀಯವಾಗಿ ಗೆಲುವು ಸಾಧಿಸದಿದ್ದರೂ, ಭ್ರಷ್ಟಾಚಾರ ಹಾಗೂ ಇಂದಿನ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಸಡ್ಡು ಹೊಡೆಯುವುದಕ್ಕಾಗಿ ಪ್ರಜಾಕೀಯವನ್ನು ಸ್ಥಾಪಿಸುವುದಾಗಿ ಉಪೇಂದ್ರ ಅವರು ಈಗಾಗಲೇ ಹೇಳಿಕೊಂಡಿದ್ದಾರೆ.ಆದರೆ, ಅದಕ್ಕೆ ನಿರೀಕ್ಷಿಸಿದಷ್ಟು ಜನಬೆಂಬಲ ವ್ಯಕ್ತವಾಗಿಲ್ಲ.
ನಿಗಮ, ಮಂಡಳಿಗೂ ಅನೇಕರ ಸೇವೆ ;
ಶಾಸಕರು, ಸಂಸದ, ಸಚಿವರಾಗಿ ಕೆಲವರು ಗುರುತಿಸಿಕೊಂಡಿದ್ದರೆ, ಇನ್ನು ಅನೇಕರು ನಿಗಮ ಮಂಡಳಿಗಳಿಗೆ ಅಧ್ಯಕ್ಷ- ಉಪಾಧ್ಯಕ್ಷರಾಗಿ ರಾಜಕೀಯ ಸೇವೆ ಸಲ್ಲಿಸಿದ್ದಾರೆ. ಭಾವನ, ಶ್ರುತಿ ಸೇರಿದಂತೆ ಅನೇಕರ ನಟ, ನಟಿ ಹಾಗೂ ಸಿನಿಮಾ ಮಂದಿ ತಮನ್ನು ತಾವು ಸಾರ್ವಜನಿಕರ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಅನೇಕರು, ಸರಕಾರದ ಮಟ್ಟದಲ್ಲಿ ಯಾವುದೇ ಸ್ಥಾನ ಪಡೆಯದಿದ್ದರೂ, ಪಕ್ಷದ ವೇದಿಕೆಯಲ್ಲಿ ಆಯಕಟ್ಟಿನ ಸ್ಥಾನವನ್ನು ಪಡೆದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ