ಐಫೋನ್ ಘಟಕಕ್ಕೆ ಶೀಘ್ರ 300 ಎಕರೆ ಹಸ್ತಾಂತರ
ಐಫೋನ್ ತಯಾರಿಸುವ ಫಾಕ್ಸ್ ಕಾನ್ ಕಂಪನಿಗೆ 300 ಎಕರೆ ಭೂಮಿ ಹಸ್ತಾಂತರಿಸುವ ಸಂಬಂಧ ಇದ್ದ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ. ಶೀಘ್ರವೇ ಕಂಪನಿಗೆ ಜಾಗ ಹಸ್ತಾಂತರಿಸಲಾಗುತ್ತದೆ. ಕಂಪನಿ ಅಂದಾಜು 8,500 ಕೋಟಿ ರೂ. ಬಂಡವಾಳ ಹೂಡಿ ತಯಾರಿಕೆ ಘಟಕ ಸ್ಥಾಪಿಸಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಂಪನಿಗೆ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ಹೋಬಳಿಗೆ ಸೇರಿದ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದಲ್ಲಿ ( ಐಟಿಐಆರ್ ) 300 ಎಕರೆ ಜಾಗ ಕೊಡಲಾಗುತ್ತದೆ. ಭೂಮಿ ಹಸ್ತಾಂತರವಾಗುತ್ತಿದ್ದಂತೆ ಕಂಪನಿಯು ನಿರ್ಮಾಣ ಕಾಮಗಾರಿ ಶುರು ಮಾಡಬಹುದು ಎಂದರು.
ನಿರೀಕ್ಷೆ ಪ್ರಕಾರ ಮುಂದಿನ ವರ್ಷ ಕೂಡ ಆರಂಭಿಸಲಿದೆ. 50 ಸಾವಿರ ಜನರಿಗೆ ಉದ್ಯೋಗ ದೊರಕಿಸುವ ಈ ಯೋಜನೆಯ ಬಗ್ಗೆ ಸರ್ಕಾರ ಆದ್ಯತೆ ವಹಿಸಿದೆ ಎಂದು ವಿವರಿಸಿದರು. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳೆದ ಮೂರೂ ವರ್ಷಗಳಲ್ಲಿ ಮೂರೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಸ್ಥಾಪನೆಯಾಗಿವೆ.
ಇವು ಅಂದಾಜು 786 ಕೋಟಿ ರೂ. ಹೂಡಿಕೆ ಮಾಡಿದ್ದು, 1,450 ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೇಳಿದರು.
ತಾಲೂಕಿನ ಕೈಗಾರಿಕೆ ಪ್ರಾಂಗಣದಲ್ಲಿ ಮೂಲಸೌಕರ್ಯ ಕೊರತೆ ಬಗ್ಗೆ ಗಮನ ಸೆಳೆದ ಶಾಸಕ ಧೀರಜ್ ಮುನಿರಾಜು, ಕೈಗಾರಿಕಾ ಪ್ರಾಂಗಣ ಸಂಪರ್ಕಿಸುವ ರಸ್ತೆಗಳು ಹದಗೆಟ್ಟಿವೆ. ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳಿಲ್ಲ ಎಂದು ಹೇಳಿದರು.
ಇದಕ್ಕುತ್ತರಿಸಿದ ಸಚಿವರು ರಾಜ್ಯದ ಎಲ್ಲ ಕೈಗಾರಿಕಾ ಪ್ರಾಂಗಣಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ. ಜತೆಗೆ ಎಲ್ಲ ಕೈಗಾರಿಕಾ ಪ್ರಾಂಗಣಗಳನ್ನು ಅಸೋಷಿಯೇಷನ್ ಗೆ ವಹಿಸುವ ಉದ್ದೇಶವಿದೆ. ಆ ಪ್ರಾಂಗಣದಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ಶೇ.70 ರಷ್ಟನ್ನು ಆ ಪ್ರದೇಶದ ಅಭಿವುದ್ಧಿಗೆ ಉಳಿದ ಶೇ. ರಷ್ಟನ್ನು ಸ್ಥಳೀಯ ಸಂಸ್ಥೆಗೆ ನೀಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.