ಗೃಹಜ್ಯೋತಿಯಲ್ಲಿ 3 ಇತರೆ ಜ್ಯೋತಿಗಳ ವಿಲೀನ !!!

ಗೃಹಜ್ಯೋತಿಯಲ್ಲಿ 3 ಇತರೆ ಜ್ಯೋತಿಗಳ ವಿಲೀನ !!!

ಕುಟೀರ ಜ್ಯೋತಿ, ಭಾಗ್ಯಜ್ಯೋತಿ, ಅಮೃತ ಜ್ಯೋತಿ ಸ್ಕೀಮ್ ವಿಲೀನ । ವಿಲೀನದಿಂದ ಹಳೆ ಯೋಜನೆದಾರರಿಗೆ ಹೆಚ್ಚುವರಿ ಬಳಕೆ ಅವಕಾಶ :



      ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಾಗಿರುವ ಹಿನ್ನಲೆಯಲ್ಲಿ ಈ ಮೊದಲು ಬಡವರಿಗೆ ಉಚಿತ ವಿದ್ಯುತ್ ಪೂರೈಸಲು ಅಸ್ತಿತ್ವದಲ್ಲಿದ್ದ ಕುಟೀರ ಜ್ಯೋತಿ ಭಾಗ್ಯಜ್ಯೋತಿ ಅಮೃತ ಜ್ಯೋತಿ ಯೋಜನೆಗಳನ್ನು ಗೃಹ ಜ್ಯೋತಿಯಲ್ಲಿ ವಿಲೀನಗೊಳಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ 3 ಯೋಜನೆಗಳ 50 ಲಕ್ಷ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಮಿತಿ ತುಸು ಹೆಚ್ಚಾಗಿದೆ.

ಈ ಮೊದಲು ಬಡವರಿಗೆ ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಳ ಅಡಿ 40 ಯೂನಿಟ್ ವರೆಗಿನ ವಿದ್ಯುತ್ ಉಚಿತವಾಗಿ ಬಳಸಲು ಅವಕಾಶವಿತ್ತು. ಇದೀಗ ಈ ಯೋಜನೆಯ ಫಲಾನುಭವಿಗಳನ್ನು ಗೃಹ ಜ್ಯೋತಿಗೆ ವಿಲೀನಗೊಳಿಸಲಾಗಿದೆ. ಜತೆಗೆ ರಾಜ್ಯದ ಸರಾಸರಿ ವಿದ್ಯುತ್ ಬಳಕೆಯಾಗಿರುವ 53 ಯೂನಿಟ್ ಹಾಗೂ ಅದಕ್ಕೆ ಶೇ 10 ರಷ್ಟು ಹೆಚ್ಚುವರಿ ಸೇರಿಸಿ ಒಟ್ಟು 58 ಯೂನಿಟ್ ಗಳವೆರೆಗೆ ಉಚಿತವಾಗಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ಕಳೆದ ವರ್ಷ ಜಾರಿಗೆ ಬಂದಿದ್ದು ಅಮೃತ ಯೋಜನೆಯಡಿ SC ಹಾಗೂ ST ಫಲಾನುಭವಿಗಳಿಗೆ 75 ಯುನಿಟಗಳವರೆಗೆ ಉಚಿತ ವಿದ್ಯುತ್ ನೀಡಲಾಗಿತ್ತು. ಇದನ್ನು ಗೃಹಾಜ್ಯೋತಿ ಅಡಿಗೆ ತಂದಿದ್ದು, ಶೇ 10ರಷ್ಟು ಹೆಚ್ಚು ವಿದ್ಯುತ್ ಬಳಕೆಗೆ ಅವಕಾಶ ಕಲ್ಪಿಸಿದ್ದು, 82 ಯೂನಿಟ್ ವರೆಗೆ ಉಚಿತವಾಗಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. 
          ಇನ್ನು ಅಮೃತ ಯೋಜನೆ ಅಡಿ DBT ಮೂಲಕ ಪಡಿಹಾರ ಕಲ್ಪಿಸಲಾಗುತ್ತಿತ್ತು. ಮೊದಲು ಬಳಕೆ ಮಾಡಿರುವ ವಿದ್ಯುತ್ ಗೆ ಫಲಾನುಭವಿಗಳು ಶುಲ್ಕ ಪಾವತಿಸಬೇಕಾಗಿತ್ತು. ಅದನ್ನು ಸರ್ಕಾರ ಸಬ್ಸಿಡಿ ಹೆಸರಿನಲ್ಲಿ ಮರು ಪಾವತಿ ಮಾಡುತ್ತಿತ್ತು. ಇದೀಗ ಗೃಹ ಜ್ಯೋತಿ ಅಡಿ ಸೇರ್ಪಡೆಯಾಗಿರುವುದರಿಂದ ಅವರು 82 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆಗೆ ಶುಲ್ಕ ಪಾವತಿಸುವಂತಿಲ್ಲ ಎಂದು ಹೇಳಲಾಗಿದೆ.
       ಈ ಮೂರೂ ಯೋಜನೆಗಳಿಗೆ ಸರ್ಕಾರ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಹೆಚ್ಚುವರಿ ಬಳಕೆಗೆ ಶುಲ್ಕ ಪಾವತಿಸಬೇಕಾಗುತ್ತದೆ. 

ಗೊಂದಲ ನಿವಾರಣೆ:

ರಾಜ್ಯದಲ್ಲಿ ಗೃಹ ಜ್ಯೋತಿ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಗೆ 2.18 ಕೋಟಿ ಜನರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇತ್ತು. ಆದರೆ ನೋಂದಣಿಗೆ ಅವಕಾಶ ನೀಡಿ ಒಂದೂವರೆ ತಿಂಗಳು ಕಳೆದರೂ 1.15 ಕೋಟಿ ಮಂದಿ ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.
              ಜುಲೈ 27ರ ಒಳಗಾಗಿ ನೋಂದಣಿ ಮಾಡಿಕೊಳ್ಳದಿದ್ದರೆ, ಆಗಸ್ಟ್ ನಲ್ಲಿ ಬರುವ ಜುಲೈ ಬಳಕೆಯ ಬಿಲ್ ಉಚಿತ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರೂ ನೋಂದಣಿ ಪ್ರಮಾಣ ಹೆಚ್ಚಾಗಿರಲಿಲ್ಲ.
ಗೃಹಾಜ್ಯೋತಿ ಯೋಜನೆಯು ತಮಗೆ ಅನ್ವಯವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಕಾರಣಕ್ಕೆ ಮೂರು ಜ್ಯೋತಿ ಕಾರ್ಯಕ್ರಮಗಳ ಫಲಾನುಭವಿಗಳು ಹಿಂದೇಟು ಹಾಕುತ್ತಿದ್ದರು ಎಂದು ತಿಳಿದುಬಂದಿದೆ.

ಅರ್ಜಿ ಸಲ್ಲಿಸದಿದ್ದರೂ ಇಂಧನ ಇಲಾಖೆಯಲ್ಲಿ ಇರುವ ಮಾಹಿತಿ ಆಧರಿಸಿ ಅವರನ್ನು ಯೋಜನೆಗೆ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಿತಿಗತಿ ತಿಳಿಯಿರಿ : ಯೋಜನೆಯಡಿ ನೋಂದಣಿ ಆಗಿರುವವರು ತಮಮ್ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಲು https://sevasindhu.karnataka.gov.in ಟ್ರ್ಯಾಕ್ ಸ್ಟೇಟಸ್ ಎಂಬ ಆಯ್ಕೆ ಕ್ಲಿಕ್ ಮಾಡಿ  ವಿವರಗಳನ್ನು ನಮೂದಿಸಬೇಕು.





ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು