ನಿಮ್ಮ ಬೆಳೆ ಸಮೀಕ್ಷೆ ನೀವೇ ಮಾಡಿ !
ತಾಲೂಕಿನ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಸೇರಿದಂತೆ ಇತರೆ ಮಾಹಿತಿ ದಾಖಲಿಸಲು ರಾಜ್ಯ ಸರ್ಕಾರ ರೈತರ ಮೊಬೈಲ್ ಯಾಪ್ ಮೂಲಕ ಮುಂಗಾರು ರೈತರ ಬೆಳೆ ಸಮೀಕ್ಷೆ 2023-24 ಬಿಡುಗಡೆ ಮಾಡಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೈತ ಸಂಪರ್ಕ ಅಧಿಕಾರಿ ಬಸವರಾಜ ಸಜ್ಜನ ಕೋರಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಹೊಲದ ಸರ್ವೇ ನಂಬರ್ ಹಾಗೂ ಬಿತ್ತನೆಯಾದ ಬೆಳೆ ಮಾಹಿತಿಯನ್ನು ರೈತರು, ನಿಖರವಾಗಿ ದಾಖಲಿಸಲು ರಾಜ್ಯ ಸರ್ಕಾರ ಯಾಪ್ ಸಿದ್ಧಪಡಿಸಿ, ಬಿಡುಗಡೆ ಮಾಡಿದೆ. ರೈತರು ಪ್ಲೆ-ಸ್ಟೋರ್ ಮೂಲಕ ಯಾಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ನಂತರ ಆಧಾರ್ ಕಾರ್ಡ್ ಸಂಖ್ಯೆ ಬಳಸಿಕೊಂಡು ಯಾಪ್ ಪ್ರಾರಂಭಿಸಿ ಜಮೀನಿನಲ್ಲಿ ಬೆಳೆದ ಬೆಳೆ ಭಾವಚಿತ್ರ ತೆಗೆದು ಬೆಳೆವಾರು, ಬೆಳೆಯ ಕ್ಷೇತ್ರ ನಮೂದಿಸಿ ಸರಿಯಾಗಿ ಮಾಹಿತಿ ದಾಖಲಿಸಬೇಕು ಎಂದು ತಿಳಿಸಿದರು.
ರೈತರು, ತಮ್ಮ ಮೊಬೈಲ್ ಬಳಸಿ, ತಾವೇ ಬೆಲೆ ಮಾಹಿತಿ ದಾಖಲಿಸುವುದರಿಂದ ಮಾಹಿತಿ ನಿಖರವಾಗಿರುತ್ತದೆ. ಇದರಿಂದ ತಪ್ಪುಗಳು ಆಗುವ ಸಾಧ್ಯತೆ ಇರುವುದಿಲ್ಲ. ಸರ್ವೇ ನಂಬರ್ ಹಿಸ್ಸಾವರು ಬೆಳೆ ಸರಿಯಾಗಿ ದಾಖಲಾಗುತ್ತದೆ. ವಿವಿಧ ಯೋಜನೆಗಳಿಗೆ ಸರ್ಕಾರದಿಂದ ಬೆಳೆ ಸಮೀಕ್ಷೆ ಮಾಹಿತಿ ಬಳಸುತ್ತಿರುವುದರಿಂದ ರೈತರಿಗೆ ಅಲೆದಾಟ ತಪ್ಪುತ್ತದೆ. ಬೆಳೆ ವಿಮೆ, ಇನ್ ಪುಟ್ ಸಬ್ಸಿಡಿ, ಬೆಳೆ ಸಾಲ ಹಾಗೂ ಕಿಟಾರೋಗಕ್ಕೆ ಒಳಗಾದ ಬೆಳೆಗೆ ಸರ್ಕಾರದಿಂದ ಪರಿಹಾರ ಧನ ಸಹಾಯ ನೀಡಲು ಬೆಳೆ ಸಮೀಕ್ಷೆ ಮಾಹಿತಿ ಬಳಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರು ಖುದ್ದಾಗಿ ದಾಖಲಿಸಿ, ನನ್ನ ಬೆಳೆ ನನ್ನ ಸಮೀಕ್ಷೆ ಎನ್ನುವ ಬೆಳೆ ಸಮೀಕ್ಷೆ ಮುಂಗಾರು 2023 ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದರು.