ಬಾಗಲಕೋಟೆಯ ಮಹಿಳಾ ಒಕ್ಕೂಟದ ಮಹಿಳೆಯರು ಸ್ವಸಹಾಯ ಸಂಘದಡಿಯ ಸ್ವಯಂ-ಉದ್ಯೋಗ ಆರಂಭಿಸಿದ್ದಾರೆ.
ಮಹಿಳೆ ಮನಸ್ಸು ಮಾಡಿದರೆ ಪ್ರಪಂಚವನ್ನೇ ಗೆಲ್ಲಬಹುದು ಎಂಬುದಕ್ಕೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮದ ಮಹಿಳೆಯರು ಮಾದರಿಯಾಗಿದ್ದಾರೆ. ಇವರ ಸಾಧನೆಯ ಫಲ ಎಂಬಂತೆ ಇದೀಗ ಕೇಂದ್ರ ಸರ್ಕಾರ 5 ಕೋಟಿ ರೂಪಾಯಿ ಅನುದಾನ ನೀಡಿ ಬೃಹತ್ ಕಾರ್ಖಾನೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ.
ಹೌದು,,, ಪರಿಸರ ಸ್ನೇಹಿ ಬ್ಯಾಗ್ ತಯಾರಿಕೆ ಮೂಲಕ ಬಾಗಲಕೋಟೆ ವನಿತೆಯರು ರಾಜ್ಯವಲ್ಲದೆ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲೂ ಯಶಸ್ವಿಯಾಗಿದ್ದಾರೆ. ಕಟಗೇರಿ ಗ್ರಾಮದಲ್ಲಿರುವ ಪಂಚಾಯತ್ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಕಾರ್ಯವನ್ನು ಮೆಚ್ಚಿ ಕೇಂದ್ರ ಸರ್ಕಾರ ಬ್ಯಾಗ್ ಕ್ಲಸ್ಟರ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಈ ಮೂಲಕ ಜಿಲ್ಲೆಯ ಸಾವಿರಾರು ಸಂಖ್ಯೆಯ ಮಹಿಳೆಯರಿಗೆ ಉದ್ಯೋಗ ಸಿಗಲಿದ್ದು, ದೇಶಕ್ಕೆ ಇವರ ಸಾಧನೆ ಮಾದರಿ ಆಗಿದೆ. ಮೊದಲು 5 ಲಕ್ಷ ರೂಪಾಯಿಗಳ ಸರ್ಕಾರದ ಸಹಾಯಧನ ಪಡೆದ ಈ ಮಹಿಳೆಯರು ನಂತರ ಕೇಂದ್ರ ಸರ್ಕಾರದಿಂದ 21 ಲಕ್ಷ ರೂಪಾಯಿಗಳ ಸಹಾಯಧನ ಪಡೆದರು. ಅದೇ ಉತ್ಸಾಹ, ಶ್ರಮದಿಂದ ಈಗ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸಿ, ಲಾಭದಾಯಕವನ್ನಾಗಿಸಿದ್ದಾರೆ. ಪ್ರತಿ ಮಹಿಳಾ ಘಟಕದವರಿಗೂ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ, ಸ್ವ-ಉದ್ಯೋಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಪ್ಲಾಸಿಕ್ ರಹಿತ ಬ್ಯಾಗ್ ತಯಾರಿಕೆ :
ಪ್ಲಾಸ್ಟಿಕ್ ಬಳಕೆ ಇಲ್ಲದೆ ಗುಳೇದಗುಡ್ಡ ಕ್ಷಣದಿಂದ ವಿವಿಧ ಬಗೆಯ ಆಕರ್ಷಕ ಬ್ಯಾಗ್ ತಯಾರಿಸುತ್ತಾರೆ. ರಾಜ್ಯ ಅಷ್ಟೇ ಅಲ್ಲದೆ ದೇಶದ ವಿವಿಧ ಪ್ರದೇಶದಲ್ಲಿ ನಡೆಯುವ ಮೇಳದಲ್ಲಿ ಈ ಮಹಿಳೆಯರು ಭಾಗವಹಿಸಿ ತಮ್ಮ ಕಲೆಯನ್ನು ಪಸರಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ನಡೆದ ಸರಸ್ ಮೇಳದಲ್ಲಿ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ. ಮಹಿಳಾ ದಿನಾಚರಣೆ ಸಮಯದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇವರ ಕೆಲಸ ಕಾರ್ಯಗಳನ್ನು ಮೆಚ್ಚಿ ಕೇಂದ್ರ ಸರ್ಕಾರದ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಒಟ್ಟಾರೆ ಮನೆಯಲ್ಲಿ ಹಣಕ್ಕಾಗಿ ಕೈವೊಡ್ಡದೆ, ತಾವೇ ಮನೆಯ ಯಜಮಾನಿ ಆಗಿ ಕುಟುಂಬ ನಿರ್ವಹಣೆ ಜೊತೆಗೆ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸುತ್ತಿದ್ದಾರೆ. ಈ ಸಾಧನೆಗೆ ಮನೆಯವರ ಸಹಕಾರವೂ ಇದ್ದು, ತಮ್ಮಲ್ಲಿ ಸಾಕಷ್ಟು ಬದಲಾವಣೆ ಆಗಿರುವುದಾಗಿ ಮಹಿಳಾ ಒಕ್ಕೂಟ ಸದಸ್ಯರಾದ ಭಾಗೀರಥಿ ಮೇಟಿ ತಿಳಿಸಿದ್ದಾರೆ.
Tags
Social