SSLC Kannada: ಪದ್ಯ ಪಾಠ: ಸಂಕಲ್ಪ ಗೀತೆ | ಮಾದರಿ ಪ್ರಶ್ನೋತ್ತರಗಳು
SSLC ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗಾಗಿ ಆನ್ ಲೈನ್ ನಲ್ಲಿಯೇ ಮನೆಯಲ್ಲಿಯೇ ಕುಳಿತು ಅಭ್ಯಾಸ ಮಾಡಲು ಪ್ರಥಮ ಭಾಷೆ ಕನ್ನಡ ವಿಷಯದ ಪದ್ಯ ಪಾಠ: ಸಂಕಲ್ಪ ಗೀತೆ ಈ ಪಾಠದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ತಮಗೆ ಅನುಕೂಲವಾದ ಯಾವುದೇ ಸಮಯದಲ್ಲಿ ಈ ಪುಟಕ್ಕೆ ಭೇಟಿ ನೀಡಿ, ಇಲ್ಲಿ ನೀಡಲಾಗಿರುವ ಪ್ರಶ್ನೋತ್ತರಗಳನ್ನು ಪದೇ ಪದೇ ಅಭ್ಯಾಸ ಮಾಡಬಹುದಾಗಿದೆ.
ಈ ಪ್ರಶ್ನೋತ್ತರಗಳನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ, SSLC ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಅತ್ಯಂತ ಸಹಾಯಕವಾಗಲಿದೆ.
ಕವಿ-ಕಾವ್ಯ-ಪರಿಚಯ
ಜಿ. ಎಸ್. ಶಿವರುದ್ರಪ್ಪ ಎಂದೇ ಪ್ರಸಿದ್ದರಾಗಿರುವ ಗುಗ್ಗುರಿ ಶಾಂತವೀರಪ್ಪ ಶಿವರುದ್ರಪ್ಪನವರು ಕ್ರಿ.ಶ.1926ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಆಧುನಿಕ ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಶಿವರುದ್ರಪ್ಪನವರು ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದಹೆಜ್ಜೆ, ಅನಾವರಣ, ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂದರ್ಯ ಸಮಿಕ್ಷೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಕಾವ್ಯಾರ್ಥಚಿಂತನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಶಿವರುದ್ರಪ್ಪ ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ರಾಷ್ಟ್ರಕವಿ ಅಭಿದಾನ ಮತ್ತು ಪಂಪ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಾದರಿ ಪ್ರಶ್ನೋತ್ತರಗಳು
ಒಂದು ಅಂಕದ ಪ್ರಶ್ನೆಗಳು
1. ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು ?
ಉತ್ತರ: ಬಿರುಗಾಲಿಗೆ ಹೊಯ್ದಾಡುವ ಹಡಗನ್ನು ಎಚ್ಚರದಿ ಮುನ್ನಡೆಸಬೇಕು.
2. ನದಿಜಲಗಳು ಏನಾಗಿವೆ ?
ಉತ್ತರ: ನದಿಜಲಗಳು ಕಲುಷಿತವಾಗಿವೆ.
3. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ?
ಉತ್ತರ: ಕಲುಷಿತವಾದ ನದಿಜಲಗಳಿಗೆ ಮುಂಗಾರಿನ ಮಳೆಯಾಗಬೇಕು.
4. ಕಾಡುಮೇಡುಗಳ ಸ್ಥಿತಿ ಹೇಗಿದೆ?
ಉತ್ತರ: ಕಾಡುಮೇಡುಗಳು ಬರಡಾದ ಸ್ಥಿತಿ ತಲುಪಿವೆ.
5. ಯಾವ ಎಚ್ಚರದೊಳು ಬದುಕಬೇಕಿದೆ ?
ಉತ್ತರ: ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು ಬದುಕಬೇಕಿದೆ.
ಎರಡು ಅಂಕದ ಪ್ರಶ್ನೆಗಳು
1. ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ ?
ಉತ್ತರ: ಅಂಧಕಾರವನ್ನು ಹೋಗಲಾಡಿಸಲು ದೀಪದ ಅವಶ್ಯಕತೆ ಇರುವಂತೆ ಬದುಕಿನಲ್ಲಿ ಅಥವಾ ಮನಸ್ಸಿನಲ್ಲಿ ಕವಿದ ನಿರಾಶೆಯ, ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಜ್ಞಾನದ ಮತ್ತು ಪ್ರೀತಿಯ ಹಣತೆಯನ್ನು ಹಚ್ಚಬೇಕು ಬಿರುಗಾಳಿ ಬೀಸಿದಾಗ ಹಡಗನ್ನು ಎಚ್ಚರದಿಂದ ಮುನ್ನಡೆಸುವ ಹಾಗೆ ಬದುಕಿನಲ್ಲಿ ಆಗಾಗ ಬರುವ ಸಮಸ್ಯೆಗಳೆನ್ನುವ ಬಿರುಗಾಳಿ ಬೀಸಿದಾಗ ಅದನ್ನು ನಿವಾರಿಸಿಕೊಳ್ಳುತ್ತ ಎಚ್ಚರದಿಂದ ಈ ಜೀವನವೆನ್ನುವ ಹಡಗನ್ನು ಮುನ್ನಡೆಸಬೇಕು. ಅಸ್ಪಷ್ಟತೆಯಿಂದ ಸ್ಪಷ್ಟತೆಯೆಡೆಗೆ ದೃಢವಾದ ಹೆಜ್ಜೆಗಳನ್ನಿಡುತ ಮುಂದೆ ಸಾಗಬೇಕು. ಅಜ್ಞಾನ ನಿರಾಶೆಗಳ ದಾರಿಯಲ್ಲಿ ಕವಿದ ಕತ್ತಲೆಯನ್ನು ಹೋಗಲಾಡಿಸಲು ಜ್ಞಾನದ, ಪ್ರೀತಿಯ ಹಣತೆಯ ಹಚ್ಚಿ, ಸಮಸ್ಯೆಗಳಿಂದ ಬದುಕಿನ ಹಡಗು ಮುಳುಗಿ ಹೋಗದಂತೆ ಎಚ್ಚರದಿಂದ ಜೀವನವನ್ನು ನಡೆಸೋಣ.
2. ನಾಳಿನ ಕನಸನ್ನು ಬಿತ್ತ ಬೇಕಾದರೆ ನಾವು ಹೇಗೆ ಬದುಕಬೇಕು ?
ಉತ್ತರ: ಪ್ರತಿಯೊಂದು ಮತಕ್ಕೂ ಅದರದೆ ಆದ ದಾರಿಯಿದೆ ಎನ್ನುವ ಎಚ್ಚರದಲ್ಲಿ ಬದುಕೋಣ ಭಿನ್ನತೆಯಿದ್ದರೂ ಸಹ ಭಾವನೆ ಒಂದೆ ಎಂಬ ಅರಿವು ಮೂಡಿಸಲು ಯತ್ನಿಸೋಣ. ಪರಸ್ಪರರಲ್ಲಿ ಮೂಡಿರುವ ಸಂಶಯ, ಅಸಹನೆ, ಭಯಗಳಿಂದ ಉಂಟಾಗಿರುವ ನಿರಾಶೆಯನ್ನು ಹೋಗಲಾಡಿಸಿ ನಾಳಿನ ಭವಿಷ್ಯದ ಕುರಿತಾಗಿ ಹೊಸ ಕನಸುಗಳನ್ನು ಬಿತ್ತುವ, ಭರವಸೆಗಳನ್ನು ಮೂಡಿಸುವ, ಎಲ್ಲರೂ ಒಂದಾಗಿ ಬದುಕುವಂತೆ ಸಮಾಜದಲಿ ಉತ್ಸಾಹ, ಆದರ್ಶಗಳ ವಾತಾವರಣ ಬೆಳೆಯುವಂತೆ ಮಾಡೋಣ. ಭಯ ಮತ್ತು ಅನುಮಾನ ಆವರಿಸಿರುವ ಸಮಾಜವನ್ನು ದೃಢ ನಿಷ್ಠೆಯಿಂದ ಸ್ವಾಸ್ಥ್ಯದ ನೆಲೆಯಾಗಿಸುವ ಸಂಕಲ್ಪ ಮಾಡೋಣ.
ಮೂರು/ನಾಲ್ಕು ಅಂಕದ ಪ್ರಶ್ನೆಗಳು
1. ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ ?
ಉತ್ತರ: ನಾವು ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷ ರಹಿತ ಸಮಾಜ ನಿರ್ಮಾಣ ಮಾಡಬಹುದು. ನಾವು ಬದುಕಿನಲ್ಲಿ ಎಚ್ಚರಿಕೆಯಿಂದ ಮುನ್ನಡೆಯುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನು ಧೈರ್ಯವಾಗಿ ಎದುರಿಸಬಹುದು. ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದಿ ಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು. ನಾವು ವನ ಸಂರಕ್ಷಣೆಯ ಸಂಕಲ್ಪ ಕೈಗೊಳ್ಳುವುದರಿಂದ ಕಾಡುಗಳು ಹಚ್ಚಹಸುರಿನಿಂದ ಸಮೃದ ವಾಗುವಂತೆ ಮಾಡಬಹುದು. ನಾವು ಹೊಸ ಭರವಸೆಯನ್ನು ಮೂಡಿಸುವ ಸಂಕಲ್ಪ ಕೈಗೊಳ್ಳುವುದರಿಂದ ಸಮಾಜದ ನೈತಿಕ ಅಧಃ ಪತನವನ್ನು ತಡೆಯಬಹುದು. ನಾವು ಸಮಾನತೆ ಮನೋಭಾವನೆಯುಳ್ಳವರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಮನುಜ ಮನುಜರ ನಡುವಿನ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡುಹಬಹುದು. ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು. ಭಯ ಹಾಗೂ ಸಂಶಯಗಳಿಂದ ಮುಕ್ತರಾಗುವ ಸಂಕಲ್ಪ ಕೈಗೊಳ್ಳುವುದರಿಂದ ಭವಿಷ್ಯದ ಹೊಂಗನಸನ್ನು ಕಾಣಬಹುದು. ಹೀಗೆ ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪನವರು ಸಂಕಲ್ಪ ಮತ್ತು ಅನುಷ್ಟಾನವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
2. ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ. “ಪ್ರೀತಿಯ ಹಣತೆಯ ಹಚ್ಚೋಣ”
ಉತ್ತರ: ಈ ಮೇಲಿನ ವಾಕ್ಯವನ್ನು ಡಾ|| ಜಿ.ಎಸ್. ಶಿವರುದ್ರಪ್ಪನವರು ಬರೆದ ‘ಸಂಕಲ್ಪ ಗೀತೆ’ ಎನ್ನುವ ಪದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ.
ಸಂದರ್ಭ : ಬಿರುಗಾಳಿ ಬೀಸಿದಾಗ ಹಡಗನ್ನು ಎಚ್ಚರದಿಂದ ಮುನ್ನಡೆಸುವ ಹಾಗೆ ಬದುಕಿನಲ್ಲಿ ಆಗಾಗ ಬರುವ ಸಮಸ್ಯೆಗಳನ್ನು ಬಿರುಗಾಳಿ ಬೀಸಿದಾಗ ಅದನ್ನು ನಿವಾರಿಸಿಕೊಳ್ಳುತ್ತಾ ಎಚ್ಚರದಿಂದ ಈ ಜೀವನವೆನ್ನುವ ಹಡಗನ್ನು ಮುನ್ನಡೆಸಬೇಕು. ಅಸ್ಪಷ್ಟತೆಯಿಂದ ಸ್ಪಷ್ಟತೆಯಡೆಗೆ ದೃಢದಿಂದ ಹೆಜ್ಜೆಗಳನ್ನಿಡುತ್ತ ಮುಂದೆ ಸಾಗಬೇಕು. ಅಜ್ಷಾನ, ನಿರಾಸೆಗಳ ದಾರಿಯಲ್ಲಿ ಕವಿದ ಕತ್ತಲೆಯನ್ನು ಹೋಗಲಾಡಿಸಲು ಜ್ಞಾನದ ಪ್ರೀತಿಯ ಹಣತೆಯ ಹಚ್ಚಿ ಸಮಸ್ಯೆಗಳಿಂದ ಬದುಕಿನ ಹಡಗು ಮುಳುಗಿಹೋಗದಂತೆ ಎಚ್ಚರದಿಂದ ಜೀವನವನ್ನು ನಡೆಸಬೇಕೆಂದು ಕವಿ ಆಶಿಸಿದ್ದಾರೆ.
ಸ್ವಾರಸ್ಯ : ಉತ್ತಮ ಸಮಾಜ ನಿರ್ಮಾಣಕ್ಕೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಅಗತ್ಯವಿದೆ. ಜೀವನದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದ ಅರಿವು ಹಾಗೂ ಅಗತ್ಯತೆಯ ಕುರಿತು ಮೇಲಿನ ವಾಕ್ಯವು ಸ್ಪಷ್ಟಪಡಿಸುತ್ತದೆ.
3. ಭಾವಾರ್ಥ ಸಹಿತ ಸಾರಾಂಶ ಬರೆಯಿರಿ.
ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲ್ಲಿ ಮುನ್ನಡೆಸೋಣ ||1 ||
ಭಾವಾರ್ಥ : ನಮ್ಮ ಸುತ್ತಲೂ ಹಬ್ಬಿರುವ ದ್ವೇಷ ಮತ್ತು ಅಂಧಕಾರದ ಕತ್ತಲೆಯನ್ನು ಕಳೆಯಲು, ಪ್ರೀತಿ ಮತ್ತು ಜ್ಞಾನದ ದೀಪವನ್ನು ಹಚ್ಚುವ ಮೂಲಕ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನಾದರೂ ಧೈರ್ಯವಾಗಿ ಎದುರಿಸಬಹುದು. ಯಾರಲ್ಲಿ ಪ್ರೀತಿ ಇರುತ್ತದೆಯೋ ಅಂತವರು ಎಲ್ಲರಿಗೂ ಹಿತವಾಗಿರುತ್ತಾರೆ. ಆದ್ದರಿಂದ ಪರಸ್ಪರರಾಗಿ ವಾತ್ಸಲ್ಯದಿಂದ ಪ್ರೀತಿಸಿ ನಮ್ಮ ಜೀವನವನ್ನು ಉತ್ತಮವಾಗಿ ಸಾಗಿಸಬೇಕೆಂಬ ಮೌಲ್ಯವನ್ನು ಪ್ರತಿಪಾದಿಸಿದ್ದಾರೆ.
4. ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ.
1. ಕಲುಷಿತವಾದೀ-----------ಮುಟ್ಟೋಣ
2. ಮತಗಳೆಲ್ಲವೂ------------ಬಿತ್ತೋಣ
ಉತ್ತರ: ಪಠ್ಯಪುಸ್ತಕ ನೋಡಿ