ಕಾಂಗ್ರೆಸ್ ದಿಗ್ವಿಜಯಕ್ಕೆ 10 ಕಾರಣಗಳು: ' ಕೈ ' ಬಲಪಡಿಸಿದ ಬಿಜೆಪಿ-ಜೆಡಿಎಸ್ !

 

ಕಾಂಗ್ರೆಸ್ ದಿಗ್ವಿಜಯಕ್ಕೆ 10 ಕಾರಣಗಳು: ' ಕೈ ' ಬಲಪಡಿಸಿದ ಬಿಜೆಪಿ-ಜೆಡಿಎಸ್ !



ಕಾಂಗ್ರೆಸ್ ಪಾಳಯದಲ್ಲಿ ಈಗ ಆನಂದ ಭಾಷ್ಪ, ಜಯಘೋಷ, ಕೇಕೆ. ಆಡಳಿತಾರೂಢ ಬಿಜೆಪಿ ಯನ್ನು ಮಣಿಸಿ ರಾಜ್ಯದಲ್ಲಿ ಅಧಿಕಾರ ಗಟ್ಟಿಸಿದ ಖುಷಿ ಕಾಂಗ್ರೆಸ್ ನಾಯಕರಲ್ಲಿ, ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಈ ಹಂತದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾದ ಅಂಶಗಳೇನು? ' ಗ್ಯಾರಂಟಿ ' ಗಳು ಪಕ್ಷದ ಕೈ ಹಿಡಿಯಿತಾ? ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯೇ ಕಾಂಗ್ರೆಸ್ ಗೆಲುವಿಗೆ ಕಾರಣವೆ? ಜೆಡಿಎಸ್ ಮಿಂಚದ ಕಾರಣ ಗೆಲುವು ಸಾಧಿಸಿತಾ? ಕೈ ಪಾಳಯದ ದಿಗ್ವಿಜಯಕ್ಕೆ ಕಾರಣವಾದ ಅಂಶಗಳೇನು?

ರಾಜ್ಯದಲ್ಲೀಗ ಕಾಂಗ್ರೆಸ್ ಹವಾ!

ಎಲ್ಲಿ ನೋಡಿದರು ಕೈ ಬಾವುಟವೇ ರಾರಾಜಿಸುತ್ತಿದೆ. ಸಿದ್ದು, ಡಿಕೆಶಿ, ಖರ್ಗೆ ನಾಯಕತ್ವಕ್ಕೆ ಜೈಕಾರ ಕೇಳಿ ಬರುತ್ತಿದೆ. ಈ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾದ ಅಂಶಗಳೇನು? ಬಿಜೆಪಿಯ ವೈಫಲ್ಯಗಳೇನು? ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಅಷ್ಟಾಗಿ ಮಿಂಚಲಿಲ್ಲ ಏಕೆ? ಹೀಗೆ ಹಲವು ಪ್ರಶ್ನೆಗಳು ಎದ್ದಿವೆ. ಮೋದಿ-ಅಮಿತ್ ಶಾ ಆರ್ಭಟದ ನಡುವೆಯೂ ರಾಜ್ಯದ ಮತದಾರ ಬಿಜೆಪಿಗೆ ಏಕೆ ಒಲಿಯಲಿಲ್ಲ ಎಂಬ ಪ್ರಶ್ನೆಗಳುಇವೆ. ಈ ಕುರಿತ ಸಮಗ್ರ ಅವಲೋಕನ ಇಲ್ಲಿದೆ.

 

1. ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆ.


ಕಾಂಗ್ರೆಸ್ ಪಕ್ಷದತ್ತ ರಾಜ್ಯದ ಮತದಾರ ಒಲವು ತೋರೋದಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯೇ ಪ್ರಮುಖ ಕಾರಣ ಎನ್ನಬಹುದು. ಆಡಳಿತಾರೂಢ ಪಕ್ಷಕ್ಕೆ ರಾಜ್ಯದ ಮತದಾರ ಮತ್ತೊಂದು ಅವಧಿಗೆ ಅಧಿಕಾರ ಕೊಟ್ಟ ಉದಾಹರಣೆ ಇತಿಹಾಸದಲ್ಲೇ ಇಲ್ಲ. ಕಳೆದ ೩೮ ವರ್ಷಗಳಿಂದ ಈ ಪರಿಪಾಠ ನಡೆದು ಬಂದಿದೆ. ಜೊತೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರ ಸಿಗೋದು ಕಷ್ಟ. ಹೀಗಾಗಿ ರಾಜ್ಯದ ಮತದಾರನ ಒಲವು ಈ ಬಾರಿ ಸಹಜವಾಗಿಯೇ ಕಾಂಗ್ರೆಸ್ ಪಕ್ಷದ ಪರ ಇದೆ ಅನ್ನೋ ಮಾತುಗಳು ಆರಂಭದಿಂದಲೂ ಕೇಳಿ ಬಂದಿದ್ದವು. ಬಿಜೆಪಿ ನಾಯಕತ್ವ ಕೂಡ ರಾಜ್ಯದ ಚುನಾವಣಾ ಇತಿಹಾಸ ಬದಲಾವಣೆ ಮಾಡೋದಲ್ಲಿ ವಿಫಲವಾಗಿದೆ. ಪ್ರತಿಪಕ್ಷದಲ್ಲಿ ಕುಳಿತಿದ್ದ ಕಾಂಗ್ರೆಸ್, ಇದೀಗ ರಾಜ್ಯದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.

2. ಪೇಸಿಎಂ, ಭ್ರಷ್ಟಾಚಾರ ಆರೋಪ.

ಕಾಂಗ್ರೆಸ್ ನಾಯಕರು ಚುನಾವಣೆಗೆ ವರ್ಷ ಮುನ್ನವೇ ಬಿಜೆಪಿ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರ ಆರೋಪ ಮಾಡುತ್ತಲೇ ಬಂದಿದ್ದರು. ಸಿಎಂ ಬೊಮ್ಮಾಯಿ ವಿರುದ್ಧ ೪೦ ಪರ್ಸೆಂಟ್ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು ಪೇಸಿಎಂ ಅಭಿಯಾನವನ್ನೇ ಆರಂಭ ಮಾಡಿದ್ದರು. ಇದಕ್ಕೆ ಪೂರಕ ಎಂಬಂತೆ ಕೆ.ಎಸ.ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ. ಗುತ್ತಿಗೆದಾರರ ಸಂಘ ಕೂಡ ಪ್ರಧಾನಿ ಮೋದಿ ಅವರಿಗೆ ದೂರು ನೀಡಿತ್ತು. ಚುನಾವಣೆ ಹೊತ್ತಲ್ಲಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರನ ವಿರುದ್ಧ ಲೋಕಾಯುಕ್ತ ದಾಳಿ ನಡೆದಿತ್ತು. ರಾಹುಲ್ ಗಾಂಧಿ ಆದಿಯಾಗಿ ಎಲ್ಲ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ೪೦ ಪರ್ಸೆಂಟ್ ಆರೋಪ ಮಾಡುತ್ತಿದ್ದ ಹೊತ್ತಲ್ಲೇ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ೮೫ ಪರ್ಸೆಂಟ್ ಆರೋಪದ ಅಸ್ತ್ರ ಪ್ರಯೋಗಿಸಿದರು. ಆದರೆ ಅದು ಅಷ್ಟರ ಮಟ್ಟಿಗೆ ಸಡ್ಡು ಮಾಡಲಿಲ್ಲ. ಇತ್ತ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಜಾಹಿರಾತು ರೂಪದಲ್ಲೂ ಪ್ರಕಟಿಸಿ ಗಮನ ಸೆಳೆಯಿತು.

3. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು 

ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಹಲವು ಗ್ಯಾರಂಟಿ ಆಫರ್ ಗಳನ್ನು ಘೋಷಿಸಿತು. ಈ ಗ್ಯಾರಂಟಿಗಳು ಚುನಾವಣೆ ಅಖಾಡದಲ್ಲಿ ಭಾರೀ ಸದ್ದು ಮಾಡಿದವು. ಸಾಮಾಜಿಕ ಜಾಲತಾಣಗಳು. ಟಿವಿ, ರೇಡಿಯೋ ಸೇರಿದಂತೆ ಎಲ್ಲೆಲ್ಲೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಜಾಹಿರಾತುಗಳು ಎದ್ದು ಕಾಣುತ್ತಿದ್ದವು. ಬಿಪಿಎಲ್ ಕುಟುಂಬಕ್ಕೆ ಪ್ರತಿ ತಿಂಗಳು ೧೦ ಕೆಜಿ ಉಚಿತ ಅಕ್ಕಿ, ೨೦೦ ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ಭತ್ಯೆ, ಗ್ರಹಿಣಿಯರಿಗೆ ೨ ಸಾವಿರ ರೂ. ಭತ್ಯೆ ಸೇರಿದಂತೆ ಹಲವು ಉಚಿತ ಯೋಜನೆಗಳನ್ನು ಕಾಂಗ್ರೆಸ್ ಘೋಷಿಸಿ ಗಮನ ಸೆಳೆಯಿತು. ಇದಲ್ಲದೆ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣದಂಥಾ ಯೋಜನೆಗಳನ್ನೂ ಪ್ರಕಟಿಸಿತು. ಆರಂಭದಲ್ಲಿ ಕಾಂಗ್ರೆಸ್ ನ ಉಚಿತ ಯೋಜನೆಗಳ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದರು. ನಂತರ ಬಿಜೆಪಿ ಪ್ರಣಾಳಿಕೆಯಲ್ಲಿ ಬಿಪಿಎಲ್ ಕಾರ್ಡ್ ದಾರರನ್ನೇ ಗುರಿಯಾಗಿಸಿ ಹಲವು ಉಚಿತ ಆಫರ್ ಕೊಡಲಾಯಿತು.

4. ಬೆಲೆ ಏರಿಕೆ, ನಿರುದ್ಯೋಗ 

 ಗ್ಯಾಸ್ ಸಿಲಿಂಡರ್, ದಿನಸಿ ಪದಾರ್ಥಗಳ ಬೆಲೆ ಏರಿಕೆ ವಿಚಾರವನ್ನು ಕಾಂಗ್ರೆಸ್ ಪಕ್ಷ ಚುನಾವಣಾ ಅಖಾಡದಲ್ಲಿ ಪ್ರಧಾನವಾಗಿ ಬಿಂಬಿಸಿತು. ಜೊತೆಯಲ್ಲೇ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಏರಿಕೆಯನ್ನು ಚುನಾವಣಾ ವಿಷಯ ವಸ್ತು ಮಾಡಿದ ಕಾಂಗ್ರೆಸ್, ನಿರುದ್ಯೋಗಿಗಳಿಗೆ ಭತ್ಯೆ ನೀಡೋದಾಗಿ ಪ್ರಕಟಿಸಿತು. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಸಮರ್ಥವಾಗಿ ಬಿಂಬಿಸಿದ ಕಾಂಗ್ರೆಸ್, ಯುಪಿಎ ಅವಧಿಯಲ್ಲಿ ೨೦೧೪ ರಲ್ಲಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಹಾಗೂ ಈಗ ಇರುವ ಬೆಲೆಯನ್ನು ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಸೃಷ್ಟಿಸಿತು. ಇದೆ ರೀತಿ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತಾಗಿಯೂ ಪ್ರಸ್ತಾಪ ಮಾಡಿದ ಕಾಂಗ್ರೆಸ್, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಸೂಕ್ತ ವೇದಿಕೆ ಒದಗಿಸಿತು.

5. ಖರ್ಗೆ, ಡಿಕೆಶಿ, ಸಿದ್ದು ನಾಯಕತ್ವ 

ಕಾಂಗ್ರೆಸ್ ಪಕ್ಷದ ರಾಷ್ಟೀಯ ಅಧ್ಯಕ್ಷರೇ ಕನ್ನಡಿಗರು. ಜೊತೆಗೆ ರಾಜ್ಯದಲ್ಲಿ ಸಿದ್ದು-ಡಿಕೆಶಿ ಹವಾ ಇದೆ. ಇನ್ನು ಪ್ರಾಂತ್ಯ ಮಟ್ಟದಲ್ಲಿ ನೋಡೋದಾದ್ರೆ ಎಂ.ಬಿ.ಪಾಟೀಲ್, ಲಕ್ಷ್ಮಣ್ ಸವದಿ, ಖಾದರ್, ರಮಾನಾಥ್ ರಾಯ್, ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಗೆ ಬಲ ತುಂಬಿದರು. ಇತ್ತ ಬಿಜೆಪಿ ಮುಖ್ಯವಾಗಿ ಪ್ರಧಾನಿ ಮೋದಿ ಅವರನ್ನೇ ನೆಚ್ಚಿಕೊಂಡಿತ್ತು. ರಾಜ್ಯ ನಾಯಕರಾದ ಯಡಿಯೂರಪ್ಪ ಅವರು ತೆರೆಮೇರೆಗೆ ಸೇರಿದ್ದಾರೆ. ಅನ್ನೋ ಸಂದೇಶ ಮತದಾರರಿಗೆ ರವಾನೆಯಾಗಿತ್ತು. ಇನ್ನು ಬಸವರಾಜ ಬೊಮ್ಮಾಯಿ ಸಾರಥ್ಯದ ಪ್ರಚಾರ ಅಖಾಡದಲ್ಲಿ ರಾಜ್ಯದ ಪ್ರಭಾವಿ ನಾಯಕರ ಕೊರತೆ ಎದ್ದು ಕಾಣಿತ್ತು. ಜೆಡಿಎಸ್ ನಲ್ಲಂತೂ ಎಚ್ಚಿಕೆ ಹಾಗೂ ದೇವೇಗೌಡರನ್ನು ಹೊರತುಪಡಿಸಿದರೆ ಮಿಕ್ಕ ಯಾವ ನಾಯಕರೂ ಪ್ರಚಾರ ಕಣದಲ್ಲಿ ಮಿಂಚಲೇ ಇಲ್ಲ.

6. 'ಚುನಾವಣಾ ವಿಷಯ'ಗಳೇ ಕಾಂಗ್ರೆಸ್ ಗೆಲ್ಲಿಸಿತು.

ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದು ಮಾಡಿದ ರಾಜ್ಯ ಸರ್ಕಾರದ ನಿಲುವನ್ನು ಕಾಂಗ್ರೆಸ್ ವಿರೋಧಿಸಿತು. ಲಿಂಗಾಯತರು, ಒಕ್ಕಲಿಗರಿಗೆ ಮುಸ್ಲಿಮರ ಪಾಲನ್ನು ಕಿತ್ತು ಕೊಡೋದು ಬೇಡ. ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ೭೫ ಪರ್ಸೆಂಟ್ ಗೆ ಏರಿಕೆ ಮಾಡ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದರು. ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತ ವಿಚಾರಗಳನ್ನು ಕಾಂಗ್ರೆಸ್ ಪ್ರಶ್ನೆ ಮಾಡಿತು. ಆದರೆ, ಬಿಜೆಪಿ ಚುನಾವಣೆ ಹೊತ್ತಲ್ಲಿ ಖರ್ಗೆ ಅವರು ಮೋದಿ ವಿಷ ಸರ್ಪ ಹೇಳಿಕೆಯನ್ನೇ ಪ್ರಧಾನವಾಗಿ ಬಿಂಬಿಸಿತು. ನಂತರದ ದಿನಗಳಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪವನ್ನೇ ಬಲವಾಗಿ ವಿರೋಧಿಸಿದ ಬಿಜೆಪಿ, ಬಜರಂಗ ಬಲಿ ಕಿ ಜೈ ಎಂಬ ಘೋಷಣೆ ಮಾಡಿತು. ಆದರೆ, ಈ ರೀತಿಯ ಭಾವನತ್ಮಕ ವಿಚಾರಗಳು ಕರ್ನಾಟಕದ ಮತದಾರರ ಮನ ಗೆಲ್ಲಲಿಲ್ಲ.

7.ಗುಜರಾತ್ ಮಾಡೆಲ್ ವಿಫಲ


ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಹಳೆಯ ಮುಖಗಳನ್ನು ಬದಿಗೆ ಸರಿಸಿ ಹೊಸ ಮುಖಗಳಿಗೆ ಟಿಕೆಟ್ ನೀಡುವ ಬಿಜೆಪಿ ತಂತ್ರ ವರ್ಕೌಟ್ ಆಗಿತ್ತು. ಅದೇ ತಂತ್ರವನ್ನು ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಯೋಗಿಸಿತ್ತು. ಕರ್ನಾಟಕದಲ್ಲಿ ಜನರ ಭಾವನೆ ಯಾವ ರೀತಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡದೆ, ಕೆಲವು ಅಭ್ಯರ್ಥಿಗಳನ್ನು ಬಲಿಪಶುಗಳನ್ನಾಗಿಸಿದ್ದು ಬಿಜೆಪಿ ಹೈಕಮಾಂಡ್ ಮಾಡಿಕೊಂಡ ಎಡವಟ್ಟು. ಇದು ರಾಜ್ಯದ ಬಿಜೆಪಿ ಬೆಂಬಲಿಗರಲ್ಲಿಯೂ ನಕಾರಾತ್ಮಕ ಅಭಿಪ್ರಾಯ ಬಿತ್ತಲು ಕಾರಣವಾಯಿತು. ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಅಭ್ಯರ್ಥಿ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದು, ಇಡೀ ರಾಜ್ಯ ಬಿಜೆಪಿ ವಲಯದಲ್ಲಿ ಸದ್ದು ಮಾಡಿತ್ತು. ಪುತ್ತಿಲ ಅವರನ್ನು ಬೆಂಬಲಿಸಬೇಕು ಎಂದು ಅವರ ಕ್ಷೇತ್ರಕ್ಕೆ ಸೇರದ ಮತದಾರರೂ ಮಾತನಾಡಿಕೊಂಡಿದ್ದು, ಬಿಜೆಪಿಯು ಜನರ ಮನೋಭಾವವನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಷ್ಟರಮಟ್ಟಿಗೆ ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿ. ಟಿಕೆಟ್ ಹಂಚಿಕೆಯಲ್ಲಿ ಕಮಲ ಪಾಳೆಯ ಅನುಸರಿಸಿದ ಗುಜರಾತ್ ಮಾಡೆಲ್, ಕರ್ನಾಟಕಕ್ಕೆ ಒಗ್ಗಲಾರದು ಎಂಬ ಸೂಕ್ಷ್ಮ ವಿಚಾರ ಕೇಂದ್ರದ 'ಚಾಣಕ್ಯ'ರಿಗೆ ಅರಿಯದೆ ಹೋಗಿತ್ತು.

8,ಐತಿಹಾಸಿಕ ಕಾರಣ

ಐತಿಹಾಸಿಕ ಕಾರಣ

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಆಡಳಿತ ನಡೆಸುವ ಅವಕಾಶ ಸಿಕ್ಕಿದ್ದೂ ವಿರಳ. ಕೇಂದ್ರದ ನಾಯಕರು ಇದೇ 'ಡಬಲ್ ಎಂಜಿನ್' ಸರ್ಕಾರದ ಬಗ್ಗೆ ಪದೇ ಪದೇ ಪ್ರಸ್ತಾಪಿಸಿದ್ದರು. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೆ ಅಭಿವೃದ್ಧಿ ಸುಗಮವಾಗಿ ನಡೆಯುತ್ತದೆ ಎನ್ನುವುದು ಅವರ ಪ್ರತಿಪಾದನೆ. ಇತಿಹಾಸದ ಪುಟ ತೆರೆದು ನೋಡಿದರೆ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಒಟ್ಟಿಗೆ ಆಡಳಿತ ನಡೆಸಲು ಮತದಾರ ಅವಕಾಶ ನೀಡಿದ್ದು ತೀರಾ ಕಡಿಮೆ. 2018ರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅದಕ್ಕೆ ಬಹುಮತ ಬಂದಿರಲಿಲ್ಲ. ಬಳಿಕ ನಡೆದ 'ಆಪರೇಷನ್' ಬಿಜೆಪಿ ಸರ್ಕಾರ ರಚಿಸಲು ನೆರವಾಗಿತ್ತು. ಒಂದು ಎಂಜಿನ್ ಅನ್ನು ಪ್ರಯಾಸಪಟ್ಟು ಸೇರಿಸಿದ್ದರೂ, ಅದರಿಂದ ಜನರು ಪ್ರಯೋಜನ ಸಿಕ್ಕಿಲ್ಲ ಎಂದು ತೀರ್ಪು ನೀಡಿದ್ದಾರೆ.





9.ಆಡಳಿತ ವಿರೋಧಿ ಅಲೆ

ಆಡಳಿತ ವಿರೋಧಿ ಅಲೆ

ರಾಜ್ಯದಲ್ಲಿ ಒಮ್ಮೆ ಆಡಳಿತ ನಡೆಸಿದ ಸರ್ಕಾರಕ್ಕೆ ಜನರು ಮತ್ತೆ ಅಧಿಕಾರ ಕೊಟ್ಟ ಉದಾಹರಣೆ ಹುಡುಕಲು ಹಲವು ದಶಕಗಳಷ್ಟು ಹಿಂದೆ ಹೋಗಬೇಕು. ಪ್ರತಿಬಾರಿಯೂ ಇಲ್ಲಿ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದೆ. ಅದು ನಿರೀಕ್ಷಿತ ಕೂಡ. ಆದರೆ ಕಳೆದ ಬಾರಿಗಿಂತ ಸುಮಾರು 40 ಸೀಟುಗಳನ್ನು ಕಳೆದುಕೊಂಡಿರುವುದು ಜನಾಕ್ರೋಶ ತೀವ್ರವಾಗಿದೆ ಎಂಬುದನ್ನು ಸೂಚಿಸುತ್ತದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 122 ಸೀಟುಗಳನ್ನು ಪಡೆದುಕೊಂಡಿತ್ತು. 2018ರಲ್ಲಿ ಅದು 42 ಸೀಟುಗಳನ್ನು ಕಳೆದುಕೊಂಡು ಕೇವಲ 80 ಸ್ಥಾನಗಳಿಗೆ ಕುಸಿದಿತ್ತು. ಇದು ಆಡಳಿತ ವಿರೋಧಿ ಅಲೆಯ ಸೂಚಕವಾಗಿತ್ತು. ಆದರೆ ಜನರು ಬಿಜೆಪಿಗೆ ಬಹುಮತ ನೀಡಿರಲಿಲ್ಲ. ಹಾಗಿದ್ದರೂ ಬಿಜೆಪಿ 64 ಸೀಟುಗಳನ್ನು ಹೆಚ್ಚು ಪಡೆದುಕೊಂಡಿತ್ತು. ಅದು ಈ ಚುನಾವಣೆಯಲ್ಲಿ ಉಲ್ಟಾ ಆಗಿದೆ. ಬಿಜೆಪಿಯ ಜತೆಗೆ ಜೆಡಿಎಸ್ ಸೀಟುಗಳನ್ನು ಕೂಡ ಕಾಂಗ್ರೆಸ್ ಕಸಿದುಕೊಂಡಿದೆ. ಆಡಳಿತಾರೂಢ ಪಕ್ಷದ ವಿರುದ್ಧದ ಅಲೆ ಇಲ್ಲಿ ಕೆಲಸ ಮಾಡಿರುವುದು ಸ್ಪಷ್ಟ.


10.ಕಾಂಗ್ರೆಸ್ ಅಬ್ಬರದ ಪ್ರಚಾರ

ಕಾಂಗ್ರೆಸ್ ಅಬ್ಬರದ ಪ್ರಚಾರ

ರಾಹುಲ್ ಗಾಂಧಿ ಅವರ 'ಭಾರತ್ ಜೋಡೋ ಯಾತ್ರೆ' ಮೂಲಕ ಕಾಂಗ್ರೆಸ್ ಹೊಸ ಹುಮ್ಮಸ್ಸು ಪಡೆದುಕೊಂಡಿತ್ತು. ಒಂದೆಡೆ ತನ್ನ ಸರ್ಕಾರ ಜಾರಿಗೊಳಿಸಿದ ಉತ್ತಮ ಯೋಜನೆಗಳನ್ನು ಪ್ರಸ್ತಾಪಿಸುವ ಮೂಲಕ, ಬಿಜೆಪಿ ಅವುಗಳನ್ನು ನಿಲ್ಲಿಸಿ ಜನರಿಗೆ ಅನ್ಯಾಯ ಮಾಡಿದೆ ಎಂಬ ಪ್ರಚಾರವನ್ನು ವ್ಯವಸ್ಥಿತವಾಗಿ ನಡೆಸಿತು. ಬೆಲೆ ಏರಿಕೆ, ಭ್ರಷ್ಟಾಚಾರ, ಅದಕ್ಷತೆಯ ಆರೋಪಗಳ ಜತೆಗೆ ಧರ್ಮ, ಸಾಮಾಜಿಕ ಸಂಗತಿಗಳ ವಿವಾದಗಳನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಿತು. ಸರ್ಕಾರದ ಲೋಪಗಳನ್ನು ಎತ್ತಿ ತೋರಿಸುವ ಹಾಗೂ ಅದರ ವಿರುದ್ಧ ಪ್ರತಿಭಟನೆಗಳನ್ನು ನಡೆಸುವ ಚಟುವಟಿಕೆಗಳು ಯಶಸ್ವಿಯಾದವು. ಚುನಾವಣೆಯ ಪ್ರಚಾರ ತಂತ್ರಗಳನ್ನು ಹೆಣೆಯಲು ಒಂದು ವರ್ಷಕ್ಕೂ ಮುನ್ನವೇ ತಂಡಗಳು ಸಕ್ರಿಯವಾಗಿದ್ದವು. ಇವುಗಳನ್ನು ಎದುರಿಸುವ ಪ್ರಯತ್ನವನ್ನೇ ಬಿಜೆಪಿ ಮಾಡಲಿಲ್ಲ.




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು