ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ಇಲ್ಲ
ಈ ವರ್ಷ ಡಿಗ್ರಿ ಪಾಸಾದವರಿಗೆ ಮಾತ್ರ ಯುವನಿಧಿ' । ನೌಕರಿ ಸಿಗುತ್ತಿದ್ದಂತೆ ಭತ್ಯೆ ವಿತರಣೆ ಸ್ಥಗಿತ : ಸಿಎಂ
ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಕೆಲ ಷರತ್ತುಗಳನ್ನು ವಿಧಿಸಿದ್ದು, 'ಯುವನಿಧಿ' ಯೋಜನೆಯಡಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರ ನಿರುದ್ಯೋಗಿಗಳಿಗೆ ಮಾತ್ರ ಎರಡು ವರ್ಷಗಳಿಗೆ ಸೀಮಿತವಾಗಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಹೀಗಾಗಿ ಈಗಾಗಲೇ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಹಾಲಿ ನಿರುದ್ಯೋಗಿಗಳಿಗೆ ಯೋಜನೆ ಅನ್ವಯವಾಗುವುದಿಲ್ಲ.
ಪದವಿ ಮುಗಿಸಿ 180 ದಿನಗಳಾದರೂ ಉದ್ಯೋಗ ಲಭಿಸದ 18 ರಿಂದ 25 ವರ್ಷ ವರ್ಷದೊಳಗಿನ ಯುವಕರು ಮಾಹಿತಿ ಸಂಗ್ರಹಿಸುತ್ತೇವೆ. ಇವರಲ್ಲಿ ಪದವೀಧರರಿಗೆ ಮಾಸಿಕ ೩ ಸಾವಿರ ರೂ ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ಮಾಸಿಕ 1500 ರೂ ನಿರುದ್ಯೋಗ ಭತ್ಯೆ ಪಾವತಿ ಮಾಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಚುನಾವಣಾ ಘೋಷಣೆ ವೇಳೆ ಹೇಳಿತ್ತು.
ಆದರೆ, ಶನಿವಾರದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಹಾಗೂ ಡಿಪ್ಲೋಮಾ ಮುಗಿಸಿರುವವರಿಗೆ ಮಾತ್ರ ಮುಂದಿನ 2 ವರ್ಷದವರೆಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ. ಇದರ ನಡುವೆ ಸರ್ಕಾರಿ ಅಥವಾ ಖಾಸಗಿ ಯಾವುದೇ ಉದ್ಯೋಗ ದೊರೆತರೆ ನಿರುದ್ಯೋಗ ಭತ್ಯೆ ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಪದವಿ ಮುಗಿಸಿ ಕಳೆದ 2-3 ವರ್ಷಗಳಿಂದ ಉದ್ಯೋಗಕ್ಕಾಗಿ ಅಲೆಯುತ್ತಿರುವ ನಿರುದ್ಯೋಗಿಗಳಿಗೆ ಯೋಜನೆಯಿಂದ ಪ್ರಯೋಜನವಾಗುವುದಿಲ್ಲ ಎಂಬಂತಾಗಿದೆ.
ಗೃಹ ಲಕ್ಷ್ಮಿ, ಗೃಹ ಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳಿಗೂ ರೂಪುರೇಷೆ ಸಿದ್ಧಪಡಿಸಿ ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ತನ್ಮೂಲಕ ಈ ಗ್ಯಾರಂಟಿ ಯೋಜನೆಗಳಿಗೂ ಷರತ್ತು ಅನ್ವಯಿಸುವ ಮುನ್ಸೂಚನೆ ನೀಡಲಾಗಿದೆ.
ದಾರಿಹೋಕರಿಗೆಲ್ಲಾ ನೀಡಲಾಗದು : ಡಿಕೆಶಿ