ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ : ಸ್ಮಾರ್ಟ್ ಕಾರ್ಡ್ ಬದಲು ಸಾಮಾನ್ಯ ಬಸ್ ಪಾಸ್ ನೀಡಲು ನಿರ್ಧಾರ !!
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರೀ ಬಸ್ ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿದ್ದ ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ಬದಲಾಗಿ ಸಾಮಾನ್ಯ ಬಸ್ ಪಾಸ್ ನೀಡಲು ನಿರ್ಧರಿಸಿದೆ.
ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಕೆ ಎಸ್ ಆರ್ ಟಿ ಸಿ ನಾಲ್ಕು ನಿಗಮಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈ ಯೋಜನೆ ಉದ್ಘಾಟನೆ ಆರಂಭದಲ್ಲಿ ಸಾಂಕೇತಿಕವಾಗಿ ಕೆಲ ಮಹಿಳೆಯರಿಗೆ ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ವಿತರಿಸಿತ್ತು. ಮೂರೂ ತಿಂಗಳಲ್ಲಿ ಉಚಿತ ಪ್ರಯಾಣಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ಮಹಿಳೆಯರಿಗೂ ಸ್ಮಾರ್ಟ್ ಕಾರ್ಡ್ ವಿತರಿಸುವುದಾಗಿ ಹೇಳಿತ್ತು. ಆದರೆ ಈಗ ಸ್ಮಾರ್ಟ್ ಕಾರ್ಡ್ ಬದಲು ಸಾಮಾನ್ಯ ಬಸ್ ಪಾಸ್ ನೀಡಲು ನಿರ್ಧರಿಸಿದೆ.
ಸಾರಿಗೆ ಇಲಾಖೆ ಸ್ಮಾರ್ಟ್ ಕಾರ್ಡ್ ಗಳನ್ನು ಅಭಿವೃದ್ಧಿಪಡಿಸಲು ಸೆಂಟರ್ ಫಾರ್ಮ್ ಇ-ಆಡಳಿತಕ್ಕೆ ಕೇಳಿದಾಗ ಬೇಡಿಕೆ ನಿರಾಕರಿಸಿದೆ. ಹೀಗಾಗಿ ಸಾಮಾನ್ಯ ಬಸ್ ಪಾಸ್ ನೀಡಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಮಾರ್ಟ್ ಕಾರ್ಡ್ ಅಭಿವೃದ್ಧಿ ಪ್ರಸ್ತಾಪವನ್ನು ಸಿಇಜಿ ನಿರಾಕರಿಸಿದೆ. ಸುಮಾರು ೩ ಕೋಟಿ ಸ್ಮಾರ್ಟ್ ಕಾರ್ಡ್ ತಯಾರಿ ಮಾಡಲು ನಾವು ಸಿಇಜಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚಿಸಿದ್ದೆವು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಸ್ಮಾರ್ಟ್ ಕಾರ್ಡ್ ತಯಾರಿಸಲು ಸಿಇಜಿ ಹಿಂದೇಟು ಹಾಕಿದೆ. ಹಾಗಾಗಿ ಸಾಮಾನ್ಯ ಬಸ್ ಪಾಸನ್ನೆ ಹೋಲುವ ಶಕ್ತಿ ಪಾಸ್ ಗಳನ್ನು ಪರಿಚಯಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.