ಚಂದ್ರನ ಮೇಲಿನ ಗುಂಡಿ ತಪ್ಪಿಸಿ ಓಡಾಡಿದ ರೋವರ್
ಚಂದ್ರನ ದಕ್ಷಿಣ ಧ್ರುವದ ಮೇಲಿಳಿದು ಅಲ್ಲಿನ ಮಾಹಿತಿಯನ್ನು ಭೂಮಿಗೆ ರವಾನಿಸುತ್ತಿರುವ 'ಚಂದ್ರಯಾನ-3' ರ ' ಪ್ರಜ್ಞಾನ್' ರೋವರ್, ಭಾನುವಾರ ತನಗೆ ಎದುರಾಗಿದ್ದ ದೊಡ್ಡ ಅಡ್ಡಿ ನಿವಾರಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದೆ. ರೋವರ್ ನ ಸಂಚಾರದ ವೇಳೆ ದೊಡ್ಡ ಕುಳಿಯೊಂದು ಎದುರಾದ ಕಾರಣ ಅದು ತನ್ನ ಪಥ ಬದಲಿಸಿ ಸಂಚರಿಸಿದೆ.
ಈ ಕುರಿತ ಮಾಹಿತಿಯನ್ನು ಫೋಟೋ ಸಮೇತ ಇಸ್ರೋ ಸೋಮವಾರ ಹಂಚಿಕೊಂಡಿದೆ.
ಫೋಟೋದಲ್ಲಿ ಚಂದ್ರನ ಮೇಲಿನ ಕಂದಕ ಹಾಗೂ ರೋವರ್ ಪಥ ಬದಲಿಸಿ ಸಾಗಿದ ಹಾದಿಯನ್ನು ಗಮನಿಸಬಹುದಾಗಿದೆ.
ಪ್ರಜ್ಞಾನ್ ರೋವರ್ ನ ಸಂಚಾರದ ವೇಳೆ ಆಗಸ್ಟ್.27 ರಂದು 4 ಮೀಟರ್ ಸುತ್ತಳತೆಯ ದೊಡ್ಡ ಗುಂಡಿಯೊಂದು ಕಂಡುಬಂದಿತ್ತು. ತಾನು ಇದ್ದ ಸ್ಥಳದಿಂದ ೩ ಮೀಟರ್ ದೂರದಲ್ಲಿ ಇಂಥದ್ದೊಂದು ಗುಂಡಿಯನ್ನು ಪ್ರಜ್ಞಾನ್ ನೊಳಗಿನ ಕ್ಯಾಮರಾ ಸೆರೆಹಿಡಿದು ಭೂಮಿಗೆ ರವಾನಿಸಿತ್ತು. ಈ ಮಾಹಿತಿಯನ್ನು ವಿಶ್ಲೇಷಿಸಿದ ವಿಜ್ಞಾನಿಗಳು ಅದಕ್ಕೆ ಪಥ ಬದಲಿಸಿ ಸಂಚಾರ ನಡೆಸುವಂತೆ ಸೂಚಿಸಿದರು.
ಅದರಂತೆ ಗುಂಡಿ ಇದ್ದ ಜಾಗವನ್ನು ಬಿಟ್ಟು ರೋವರ್ ಮತ್ತೊಂದು ಸುರಕ್ಷಿತ ಜಗದಲ್ಲಿ ಸಂಚಾರ ನಡೆಸಿತು. ಈ ಕುರಿತ ಎರಡೂ ಫೋಟೋಗಳನ್ನು ಇಸ್ರೋ ಸೋಮವಾರ ಬಿಡುಗಡೆ ಮಾಡಿದೆ. ಮೊದಲ ಫೋಟೋದಲ್ಲಿ ರೋವರ್ ಇರುವ ಜಾಗದಿಂದ 3 ಮೀಟರ್ ದೂರದಲ್ಲಿ ಕುಳಿಯೊಂದು ಕಂಡುಬರುತ್ತದೆ. ಮತ್ತೊಂದು ಫೋಟೋದಲ್ಲಿ ರೋವರ್ ಸಮತಟ್ಟಾದ ಜಾಗದಲ್ಲಿ ಸಂಚಾರ ಮಾಡಿದ್ದು ಕಂಡುಬರುತ್ತದೆ.
ಅತ್ಯಂತ ಕ್ಲಿಷ್ಣ ನಡಿಗೆ :
ಈ ನಡುವೆ ರೋವರ್ ನ ಸಂಚಾರ ಕ್ಲಿಷ್ಣವಾಗಿದೆ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿರುವ ಇಸ್ರೋದ ಹಿರಿಯ ವಿಜ್ಞಾನಿ ಪಿ.ವೀರಮುತ್ತುವೇಲ್, ' ಸವಾಲಿನ ನಡುವೆಯೂ ಇದುವರೆಗೆ ನಡೆಸಲಾದ ವೈಜ್ಞಾನಿಕ ಪರೀಕ್ಷೆಗಳು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ನೀಡುವ ಭರವಸೆ ನೀಡಿವೆ' ಎಂದಿದ್ದಾರೆ.
' ರೋವರ್ ಸಂಪೂರ್ಣವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಿಲ್ಲ, ಪ್ರಜ್ಞಾನ್ ನ ಪ್ರತಿ ಹೆಜ್ಜೆ ಕೂಡ ಜಟಿಲ ಮತ್ತು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಂಥ ಪ್ರತಿ ಸವಾಲನ್ನು ಇಸ್ರೋದ ಭೂಕೇಂದ್ರದ ವಿಜ್ಞಾನಿಗಳು ಒಂದೊಂದಾಗಿ ನಿರ್ವಹಿಸಬೇಕಾಗುತ್ತದೆ. ಪ್ರಜ್ಞಾನ್ ಒಮ್ಮೆಗೆ ಗರಿಷ್ಠ 5 ಮೀಟರ್ ಸಂಚರಿಸಬಹುದು. ಇಂಥ ಪ್ರತಿ ಸಂಚಾರಕ್ಕೂ ಮುನ್ನ ಅದು ಲ್ಯಾಂಡರ್ ಗೆ ಮಾಹಿತಿ ರವಾನಿಸುತ್ತದೆ. ಲ್ಯಾಂಡರ್ ಭೂಮಿಗೆ ಮಾಹಿತಿ ರವಾನಿಸುತ್ತದೆ. ಅದನ್ನು ಅಧ್ಯಯನ ಮಾಡುವ ವಿಜ್ಞಾನಿಗಳು ರೋವರ್ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ಮತ್ತೆ ಲ್ಯಾಂಡರ್ ಮೂಲಕ ರೋವರ್ ಗೆ ಸಂದೇಶ ರವಾನಿಸುತ್ತಾರೆ. ಬಳಿಕ ಆ ಕಡೆಗೆ ರೋವರ್ ಸಂಚಾರ ನಡೆಸುತ್ತದೆ. ಇಂತಹ ಪ್ರತಿ ಪ್ರಕ್ರಿಯೆಗೂ ಕನಿಷ್ಠ 5 ಗಂಟೆ ಬೇಕಾಗುತ್ತದೆ. ಅಂದರೆ ಒಮ್ಮೆ ರೋವರ್ 5 ಮೀ. ಮುಂದೆ ಸಾಗಿ ನಿಂತರೆ ಅಲ್ಲಿಂದ ಮತ್ತೆ ಸಂಚಾರ ಪುನರಾರಂಭಿಸಲು ಕನಿಷ್ಠ 5 ಗಂಟೆ ಸಮಯ ಬೇಕಾಗುತ್ತದೆ.' ಎಂದು ವೀರಮುತ್ತುವೇಲ್ ಮಾಹಿತಿ ನೀಡಿದ್ದಾರೆ.